ಗುವಾಹಟಿ, ಮಾ.02 (DaijiworldNews/HR): "ದೇಶದ ವಿವಿಧ ಭಾಗಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೊಳಿಸಲು ಬಿಜೆಪಿ ನಾಯಕರು ಶ್ರಮಿಸುತ್ತಿದ್ದಾರೆ, ಆದರೆ ಸಿಎಎಯನ್ನು ಅಸ್ಸಾಂನಲ್ಲಿ ಜಾರಿಗೊಳಿಸುವ ಪ್ರಸ್ತಾಪ ಮಾಡಲು ಅವರಿಗೆ ಧೈರ್ಯವಿಲ್ಲ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಎರಡು ದಿನಗಳ ಅಸ್ಸಾಂ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, "ಸಿಎಎಯನ್ನು ಅಸ್ಸಾಂನಲ್ಲಿ ಜಾರಿಗೊಳಿಸುವ ಪ್ರಸ್ತಾಪ ಮಾಡಲು ಅವರಿಗೆ ಧೈರ್ಯವಿಲ್ಲ, ಯಾಕೆಂದರೆ 2019ರಲ್ಲಿ ಸಿಎಎ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗೆ ಅಸ್ಸಾಂ ಸಾಕ್ಷಿಯಾಗಿದ್ದು, ಐದು ಜನರು ಮೃತಪಟ್ಟಿದ್ದರು" ಎಂದರು.
ಇನ್ನು "ಬಿಜೆಪಿ ನೀಡಿದ ಸುಳ್ಳು ಭರವಸೆಗಳಿಂದ ಜನರು ಬೇಸರಗೊಂಡಿರುವುದರಿಂದ ಕಾಂಗ್ರೆಸ್ ಮತ್ತು ಇತರ ಆರು ಪಕ್ಷಗಳ ಮೈತ್ರಿಕೂಟವು ಚುನಾವಣೆ ಬಳಿಕ ಅಸ್ಸಾಂನಲ್ಲಿ ಸರ್ಕಾರ ರಚಿಸಲಿದೆ" ಎಂದು ಹೇಳಿದ್ದಾರೆ.
ಅಸ್ಸಾಂ ಪ್ರವಾಸದ ವೇಳೆ ಅಸ್ಸಾಂನ ಕಾಂಗ್ರೆಸ್ ಘಟಕದ ಅಧ್ಯಕ್ಷ ರಿಪುನ್ ಬೋರಾ, ರಾಜ್ಯ ಉಸ್ತುವಾರಿ ನಾಯಕ ಜಿತೇಂದ್ರ ಸಿಂಗ್ ಉಪಸ್ಥಿತರಿದ್ದರು.