ಬೆಂಗಳೂರು, ಮಾ.02 (DaijiworldNews/MB) : ''ಮೊದಲು ಕುತ್ತಿಗೆಗೆ ಶಿಲುಬೆ ಹಾಕಿಕೊಂಡು ಓಡಾಡುವವರನ್ನು ಗುರುತಿಸಿ ಅವರಿಗೆ ಸೌಲಭ್ಯ ವಿತರಣೆ ಮಾಡುತ್ತಿದ್ದರೆ ಕೂಡಲೇ ನಿಲ್ಲಿಸಬೇಕು'' ಎಂದು ಅಧಿಕಾರಿಗಳಿಗೆ ಫೆ.24ರಂದು ನಡೆದ ಕೆಡಿಪಿ ಸಭೆಯಲ್ಲಿ ಸೂಚಿಸಿದ್ದ ಸಂಸದ ಪ್ರತಾಪ ಸಿಂಹನ ಸೂಚನೆಯನ್ನು ಖಂಡಿಸಿರುವ ಕರ್ನಾಟಕ ಕ್ರಿಶ್ಚಿಯನ್ ಪೊಲಿಟಿಕಲ್ ಲೀಡರ್ಸ್ ಫೋರಂ, ''ಈ ಆದೇಶಕ್ಕೆ ಸಂಬಂಧಿಸಿ ಕೂಡಲೇ ಕ್ರೈಸ್ತ ಸಮುದಾಯದ ಬಳಿ ಕ್ಷಮೆ ಕೇಳಬೇಕು. ಇಲ್ಲವಾದ್ದಲ್ಲಿ ಉಗ್ರ ಹೋರಾಟ ನಡೆಸುತ್ತೇವೆ. ಹಾಗೆಯೇ ತಾವು ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳಿಗೆ ಮುತ್ತಿಗೆ ಹಾಕುತ್ತೇವೆ'' ಎಂದು ಎಚ್ಚರಿಕೆ ನೀಡಿದೆ.
ಫೋರಂನ ಕಾರ್ಯಕರ್ತರು ನಗರದ ಮೌರ್ಯ ವೃತ್ತದ ಬಳಿಯ ಗಾಂಧಿ ಪ್ರತಿಮೆ ಬಳಿ ಸೋಮವಾರ ಶಿಲುಬೆಗಳನ್ನು ಹಿಡಿದು ಧರಣಿ ಸತ್ಯಾಗ್ರಹ ನಡೆಸಿದ್ದು ಪ್ರತಾಪ್ ಸಿಂಹನ ವಿರುದ್ದ ಘೋಷಣೆ ಕೂಗಿದರು. ಈ ಸಂದರ್ಭ ಮಾತನಾಡಿದ ಫೋರಂನ ಮುಖಂಡ ಅಂತೋಣಿ ವಿಕ್ರಂ, ''ಮನಸ್ಸಿಗೆ ಬಂದಂತೆ ಮಾತನಾಡುವುದು ಬಿಜೆಪಿ ಮುಖಂಡರಿಗೆ ಅಭ್ಯಾಸವಾಗಿ ಬಿಟ್ಟಿದೆ. ಎಲ್ಲ ಸಮುದಾಯದ ಮತ ಪಡೆದು ಗೆದ್ದ ಸಂಸದ ಪ್ರತಾಪ್ ಸಿಂಹ ಅವರಿಗೆ ನಾವು ನೀಡುವ ತೆರಿಗೆ ಹಣದಿಂದ ವೇತನ, ಭತ್ತೆ ದೊರೆಯುತ್ತಿದೆ. ಸರ್ಕಾರ ಜನರು ನೀಡುವ ದೇಣಿಗೆಯಿಂದ ಕ್ರೈಸ್ತ ಸಮುದಾಯಕ್ಕೆ ಸೌಲಭ್ಯ ನೀಡುತ್ತದೆ ವಿನಃ ಪ್ರತಾಪ್ ಸಿಂಹ ತನ್ನ ಕೈಯಿಂದ ಹಾಕುವುದಲ್ಲ. ಅವರಿಗೆ ಆ ಪರಿಜ್ಞಾನವಾದರೂ ಇರಬೇಕು'' ಎಂದು ವಾಗ್ದಾಳಿ ನಡೆಸಿದರು.
''ಪ್ರತಾಪ್ ಸಿಂಹ ಅವರಿಗೆ ಈ ದೇಶಕ್ಕೆ ಕ್ರೈಸ್ತ ಸಮುದಾಯ ನೀಡಿದ ಕೊಡುಗೆ ಬಗ್ಗೆ ತಿಳಿದಿದ್ದರೆ ಇಂತಹ ಹೇಳಿಕೆ ನೀಡುತ್ತಿರಲಿಲ್ಲ. ಓರ್ವ ಜನಪ್ರತಿ ಜಾತಿ-ಧರ್ಮದ ಆಧಾರದಲ್ಲಿ ಮಾತನಾಡುವುದು ಸರಿಯಲ್ಲ. ಬಿಜೆಪಿಯ ಕೆಲವು ಮುಖಂಡರಿಗೆ ಬೇರೆ ಸಮುದಾಯವನ್ನು ನಿಂದಿಸಿ, ಅವಹೇಳನ ಮಾಡುವುದೇ ಕೆಲಸವಾಗಿ ಬಿಟ್ಟಿದೆ. ಇಂತಹ ಅವಹೇಳನಕಾರಿ ಹೇಳಿಕೆಗಳನ್ನು ನೀಡದಿದ್ದರೆ ಅವರಿಗೆ ನಿದ್ದೆಯೇ ಬರುವುದಿಲ್ಲ. ಪ್ರತಾಪ್ ಸಿಂಹ ಅವರಿಗೆ ತಾನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರುವುದೇ ಮರೆತು ಹೋಗಿದೆ. ಅವರು ಸರ್ವಾಧಿಕಾರಿ ಆಡಳಿತದಂತೆ ಹೇಳಿಕೆ ನೀಡುತ್ತಿದ್ದಾರೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರಣಿಯಲ್ಲಿ ಡಾ.ರೆ.ಮನೋಹರ ಚಂದ್ರಪ್ರಸಾದ್, ಕ್ರಿಸ್ಟೋಫರ್, ಅನಿಲ್ ಅಂತೋಣಿ ಸೇರಿ ಹಲವರು ಭಾಗಿಯಾಗಿದ್ದರು.
ಬುಧವಾರ ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ್ದ ಸಂಸದ ಪ್ರತಾಪ್ ಸಿಂಹ, ''ಆದಿವಾಸಿಗಳಿಗೆ ನೀಡುವ ಸವಲತ್ತು ನೀಡುವಾಗ ಕೊಂಚ ಎಚ್ಚರಿಕೆಯಿಂದ ಇರಬೇಕು. ಮೊದಲು ಕುತ್ತಿಗೆಗೆ ಶಿಲುಬೆ ಹಾಕಿಕೊಂಡು ಓಡಾಡುವವರನ್ನು ಗುರುತಿಸಬೇಕು. ಬಳಿಕ ಅವರಿಗೆ ಸೌಲಭ್ಯ ವಿತರಣೆ ಮಾಡುತ್ತಿದ್ದರೆ ಕೂಡಲೇ ನಿಲ್ಲಿಸಬೇಕು'' ಎಂದು ಹೇಳಿದ್ದರು.