ನವದೆಹಲಿ, ಮಾ. 01 (DaijiworldNews/SM): ಈಗಾಗಲೇ ದೇಶದಲ್ಲಿ ಮೊದಲನೇ ಹಂತದ ಕೊರೋನಾ ಲಸಿಕೆ ವಿತರಣೆ ಕಾರ್ಯ ನಡೆದಿದ್ದು, ಇದೀಗ ಎರಡನೇ ಹಂತದ ಲಸಿಕೆ ಹಾಕಿಸಿಕೊಳ್ಳುವ ಕಾರ್ಯ ಆರಂಭಗೊಂಡಿದೆ. ಕೊರೋನಾ ಲಸಿಕೆಯಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ.
ಕೋವಿಡ್ -19 ಲಸಿಕೆಗಳ ಅಡ್ಡಪರಿಣಾಮಗಳ ಕುರಿತು ಮಾತನಾಡಿದ ಕೇಂದ್ರ ಸಚಿವರು, "ಅಡ್ಡಪರಿಣಾಮಗಳು ಊತ ಅಥವಾ ಜ್ವರದಂತೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕಾಣಿಸಿಕೊಂಡಿವೆ. ಇಂತಹ ಅಡ್ಡ ಪರಿಣಾಮಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ವ್ಯಾಕ್ಸಿನೇಷನ್ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವುದು ಕೇವಲ 0.0004 ರಷ್ಟು ಮಂದಿ ಮಾತ್ರ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಇನ್ನು ಈ ವ್ಯಾಕ್ಸಿನ್ ಪಡೆದವರಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದರು.
"ಲಸಿಕೆ ಪಡೆದ 4 ಅಥವಾ 10 ದಿನಗಳ ನಂತರ ಯಾರಾದರೂ ಮೃತಪಟ್ಟರೆ, ಅದನ್ನು ವ್ಯಾಕ್ಸಿನೇಷನ್ಗೆ ಲಿಂಕ್ ಮಾಡಲು ಸಾಧ್ಯವಿಲ್ಲ ಎಂದು ಸಚಿವರು ತಿಳಿಸಿದ್ದಾರೆ. ಇಲ್ಲಿಯವರೆಗೆ ಒಂದು ಕೋಟಿಗೂ ಹೆಚ್ಚು ಮುಂಚೂಣಿ ಕಾರ್ಮಿಕರಿಗೆ ಲಸಿಕೆ ನೀಡಲಾಗಿದೆ ಮತ್ತು 20ಕ್ಕೂ ಹೆಚ್ಚು ದೇಶಗಳು ನಮ್ಮ ಲಸಿಕೆಗಳನ್ನು ಬಳಸುತ್ತಿವೆ. ಆದರೆ, ಕೇವಲ ರಾಜಕೀಯ ಪ್ರೇರಿತವಾಗಿ ಆರೋಪಗಳಾನ್ನು ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.