ಬೆಂಗಳೂರು, ಮಾ 01 (DaijiworldNews/MS): ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಪ್ರಹಾರ ಮುಂದುವರಿದಿದ್ದು, ಅಡುಗೆ ಅನಿಲ ದರ ಮತ್ತೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ರಾಜ್ಯ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದಿದೆ.
" ಮಿತ್ರೋಂ.. ಭಾಯಿಯೊ ಔರ್ ಭೆಹನೋ ಎನ್ನುತ್ತಾ ವಿದೇಶದಲ್ಲಿರಿಸಿರುವ ಸಿರಿವಂತರ ಕಪ್ಪು ಹಣ ತರುತ್ತೇನೆಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು
ಬಡವರ ಮನೆಯ ಸಾಸಿವೆ ಡಬ್ಬಿಯ ಚಿಲ್ಲರೆ ಹಣವನ್ನು ದೋಚುತ್ತಿದ್ದಾರೆ" ಎಂದು ಕಟುವಾಗಿ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ " ನೀವು ಹೇಳುತ್ತಿದ್ದ ಅಚ್ಛೆ ದಿನ್ ಇದೇನಾ? ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ಕಳೆದ ಒಂದು ತಿಂಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 4ನೇ ಬಾರಿ ಹೆಚ್ಚಳವಾಗಿದ್ದು. ಕಳೆದ 5 ದಿನಗಳಲ್ಲಿ 2ನೇ ಬಾರಿ ಗ್ಯಾಸ್ ಸಿಲಿಂಡರ್ ದರವನ್ನು ಏರಿಕೆ ಮಾಡಲಾಗಿದೆ. ಫೆಬ್ರವರಿ 4ರಂದು ಎಲ್ಪಿಜಿ ಬೆಲೆ ₹25 ಹೆಚ್ಚಳ ಆಗಿತ್ತು. ಆ ಬಳಿಕ ಫೆ. 15ರಂದು ಮತ್ತೆ ₹50 ಏರಿಕೆಯಾಗಿತ್ತು. ಫೆ. 25ರಂದು ಮತ್ತೊಮ್ಮೆ ₹50 ಏರಿಕೆಯಾಗಿತ್ತು. ಕಳೆದ ವಾರ ಕೂಡ ಮತ್ತೆ ₹25 ಏರಿಕೆಯಾಗಿತ್ತು. ಇದೀಗ ಮತ್ತೆ 14.2 ಕೆಜಿ ಸಿಲಿಂಡರ್ಗೆ 25 ರೂಪಾಯಿ ಬೆಲೆ ಏರಿಕೆ ಮಾಡಲಾಗಿದೆ. ಡಿಸೆಂಬರ್ನಿಂದ ಈವರೆಗೆ ಸಿಲಿಂಡರ್ ಬೆಲೆ ಒಟ್ಟು ₹225 ಏರಿಕೆ ಕಂಡಿದೆ.