ಶಿರಸಿ, ಮಾ. 01(DaijiworldNews/HR): ಭಾರತದ ಪ್ರಧಾನಿ ನರೇಂದ್ರ ಮೋದಿಯೇ ಕೊರೊನಾ ಲಸಿಕೆ ಪಡೆದು, ಜನಸಾಮಾನ್ಯರ ಆತಂಕ ದೂರ ಮಾಡಿದ್ದಾರೆ" ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಈ ಕುರಿತು ನಗರದ ಕೊರೊನಾ ಲಸಿಕೆ ನೀಡುವ ಮೂರನೆ ಹಂತದ ರಾಜ್ಯಮಟ್ಟದ ಅಭಿಯಾನಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, "ಕರ್ನಾಟಕದಲ್ಲಿ 270ಕ್ಕೂ ಅಧಿಕ ಲಸಿಕಾ ಕೇಂದ್ರ ತೆರೆಯಲಾಗಿದ್ದು, ಸುಮಾರು 50 ಲಕ್ಷ ಹಿರಿಯ ನಾಗರಿಕರಿದ್ದಾರೆ. 16 ಲಕ್ಷಕ್ಕೂ ಹೆಚ್ಚು ಜನರು ಇತರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇವರೆಲ್ಲರೂ ಲಸಿಕೆ ಪಡೆದರೆ ಕೊರೊನಾ ನಿಯಂತ್ರಣಕ್ಕೆ ಸುಲಭವಾಗಲಿದೆ, ಜನರು ತಪ್ಪು ಸಂದೇಶ, ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ ದೈರ್ಯದಿಂದ ಲಸಿಕೆ ಪಡೆಯಿರಿ" ಎಂದರು.
ಇನ್ನು "ಕರ್ನಾಟಕದ ಗ್ರಾಮೀಣ ಪ್ರದೇಶದ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇದ್ದು, 2180 ವೈದ್ಯರನ್ನು ನೇರ ನೇಮಕಾತಿ ಮಾಡಿಕೊಳ್ಳಲು ತೀರ್ಮಾನಿಸಲಾಗಿ ಈ ಪ್ರಕ್ರಿಯೆ ಪೂರ್ಣಗೊಂಡಿದೆ. ಕೆಲ ವೈದ್ಯರು ನ್ಯಾಯಾಲಯದ ಮೆಟ್ಟಿಲೇರಿದ್ದು, ಕಾನೂನು ತೊಡಕು ನಿವಾರಿಸಿ ಆದಷ್ಟು ಶೀಘ್ರ ನೇಮಕಾತಿ ಮಾಡಲಾಗುವುದು" ಎಂದು ತಿಳಿಸಿದ್ದಾರೆ.