ನವದೆಹಲಿ, ಮಾ.01 (DaijiworldNews/PY): ಪಶ್ಚಿಮಬಂಗಾಳದಲ್ಲಿ ಎಂಟು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಸಲು ಉದ್ದೇಶಿಸಿರುವ ಚುನಾವಣಾ ಆಯೋಗದ ತೀರ್ಮಾನವನ್ನು ಪ್ರಶ್ನಿಸಿ ಸೋಮವಾರ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ವಕೀಲ ಎಂ.ಎಲ್ ಶರ್ಮಾ ಎನ್ನುವವರು ಅರ್ಜಿ ಸಲ್ಲಿಸಿದ್ದು, "ಸಂವಿಧಾನದ 14 ಹಾಗೂ 21ನೇ ವಿಧಿಯನ್ನು ಉಲ್ಲಂಘಿಸುತ್ತಿರುವ ಕಾರಣ ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ನಡೆಸಲು ಉದ್ದೇಶಿಸಿರುವ ವಿಧಾನಸಭೆ ಚುನಾವಣೆಗೆ ತಡೆ ನೀಡಬೇಕು" ಎಂದು ಮನವಿ ಮಾಡಿದ್ದಾರೆ.
ಕೇರಳ, ತಮಿಳುನಾಡು ಸೇರಿದಂತೆ ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಪುದುಚೇರಿ ರಾಜ್ಯಗಳ ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿತ್ತು.
ಮಾರ್ಚ್ 27ರಿಂದ ಎಪ್ರಿಲ್ 29ರವರೆಗೆ ಪಶ್ಚಿಮ ಬಂಗಾಳದಲ್ಲಿ ಎಂಟು ಸುತ್ತಿನ ಚುನಾವಣೆ ನಡೆಸಲು ಉದ್ದೇಶಿಸಿದ್ದು, ಕೇರಳ ಸೇರಿದಂತೆ ಪುದುಚೇರಿ ಹಾಗೂ ತಮಿಳುನಾಡಿನಲ್ಲಿ ಎಪ್ರಿಲ್ 6ರಂದು ಒಂದೇ ಹಂತದಲ್ಲಿ ಹಾಗೂ ಅಸ್ಸಾಂನಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ಕೆಲವು ದಿನಗಳಲ್ಲಿ ಸುಪ್ರೀಂನಲ್ಲಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಗೆ ಬರಲಿದೆ.
"ಪಶ್ಚಿಮ ಬಂಗಾಳದಲ್ಲಿ ಚುನಾವಣೆ ರ್ಯಾಲಿಯ ವೇಳೆ ಅನಗತ್ಯವಾಗಿ ಧಾರ್ಮಿಕ ಘೋಷಣೆಗಳು ಕೂಗುವುದರ ವಿರುದ್ದ ಎಫ್ಐಆರ್ ದಾಖಲಿಸಬೇಕು. ಜೈ ಶ್ರೀರಾಮ್ ಹಾಗೂ ಇತರ ಧಾರ್ಮಿಕ ಘೋಷಣೆಗಳನ್ನು ತಮ್ಮ ಚುನಾವಣಾ ಲಾಭಕ್ಕಾಗಿ ಮಾತ್ರವೇ ಘೋಷಣೆ ಮಾಡುತ್ತಿವೆ" ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.