ಛತ್ತೀಸ್ಗಢ್, ಮಾ.01 (DaijiworldNews/PY): ಕಾಡಾನೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋದ ಯುವಕನೋರ್ವ ಆನೆ ಕಾಲಿನಡಿ ಸಿಲುಕಿ ಅಪ್ಪಚ್ಚಿಯಾದ ಘಟನೆ ಛತ್ತೀಸ್ಗಢ್ನ ರಾಯಘಢದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತ ಯುವಕನನ್ನು ಮನೋಹರ್ ಪಟೇಲ್ (21) ಎನ್ನಲಾಗಿದೆ.
ಮನೋಹರ್ ತನ್ನ ಗೆಳೆಯರ ಜೊತೆ ಸೇರಿ ಆನೆ ಜೊತೆ ಸೆಲ್ಫಿ ಕ್ಲಿಕ್ಕಿಸುವ ಹುಚ್ಚಾಟಕ್ಕೆ ಹೋಗಿ ಸಾವನ್ನಪ್ಪಿದ್ದಾನೆ.
ಆನೆಯೊಂದು ಕಾಡಿನಿಂದ ಹಳ್ಳಿ ಕಡೆಗೆ ಆಹಾರ ಅರಸುತ್ತಾ ಬಂದಿದ್ದು, ಆ ವೇಳೆ ಹೆಣ್ಣಾನೆ ತನ್ನ ಮರಿಯ್ಮು ಕಳೆದುಕೊಂಡಿದೆ. ತನ್ನ ಮರಿಯನ್ನು ಕಳೆದುಕೊಂಡ ಕಾರಣ ಆನೆ ರೋಷದಿಂದ ಓಡಾಡುತ್ತಿತ್ತು. ಈ ಸಂದರ್ಭ ಮೂವರು ಸ್ನೇಹಿತರು ಆನೆ ಜೊತೆ ಸೆಲ್ಫಿ ಕ್ಲಿಕ್ಕಿಸಲು ಹೋಗಿದ್ದಾರೆ. ಆ ವೇಳೆ ಆನೆ ಮೂವರ ಮೇಲೆ ದಾಳಿ ಮಾಡಿದ್ದು, ಮೂವರು ಕೂಡಾ ಆನೆಯಿಂದ ತಪ್ಪಿಸಿಕೊಳ್ಳಲು ಓಡಾಡಿದ್ದಾರೆ. ಆದರೆ, ಮನೋಹರ್ ಪಟೇಲ್ ಆನೆಯ ಕಾಲಿನಡಿ ಸಿಕ್ಕಿ ಮೃತಪಟ್ಟಿದ್ದಾನೆ.
ಈ ವೇಳೆ ಸ್ಥಳಕ್ಕಾಗಮಿಸಿದ ಅರಣ್ಯ ಹಾಗೂ ಪೊಲೀಸ್ ಸಿಬ್ಬಂದಿಗಳು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಮೃತ ವ್ಯಕ್ತಿಯ ಕುಟುಂಬಕ್ಕೆ 25 ಸಾವಿರ ರೂ. ಪರಿಹಾರ ಮೊತ್ತವನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.