ಬೆಂಗಳೂರು, ಮಾ 01 (DaijiworldNews/MS): ಕೊರೊನಾ ಲಸಿಕೆ ಎರಡನೆ ಹಂತದ ಅಭಿಯಾನ ಮಾ.1 ರ ಇಂದಿನಿಂದ ಆರಂಭವಾಗಿದ್ದು, ರಾಜ್ಯದಲ್ಲಿ 250ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಲಸಿಕಾ ಅಭಿಯಾನ ನೀಡಲಾಗುತ್ತಿದೆ. ಇಂದಿನಿಂದ 60 ವರ್ಷ ದಾಟಿದವರು, 45 ವರ್ಷ ಪೂರ್ಣಗೊಂಡ ಕಾಯಿಲೆ ಪೀಡಿತ ವ್ಯಕ್ತಿಗಳು ಲಸಿಕೆ ಪಡೆದುಕೊಳ್ಳಬಹುದಾಗಿದೆ.
ಕೋವಿಡ್ ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳುವುದು ಹೇಗೆ?
ಕೋ-ವಿನ್ 2.0 ಆ್ಯಪ್ ಇಲ್ಲವೆ ಪೋರ್ಟಲ್ ಮೂಲಕ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಆನ್ಲೈನ್ ಮೂಲಕ ನೋಂದಾವಣೆ ಮಾಡಿಕೊಳ್ಳಲು ಸಾಧ್ಯವಿಲ್ಲದವರು ತಮ್ಮ ಸಮೀಪದ ಆಸ್ಪತ್ರೆಗೆ ತೆರಳಿ ಗುರುತಿನ ಚೀಟಿ ನೀಡಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದಾಗಿದೆ.
ಕೋ-ವಿನ್ 2.0 ಆ್ಯಪ್ ಮೂಲಕ ಒಂದು ಮೊಬೈಲ್ ಸಂಖ್ಯೆಗೆ ನಾಲ್ವರಿಗೆ ಮಾತ್ರ ಅವಕಾಶವಿದೆ. ಆಧಾರ್, ಕಾರ್ಡ್, ಪ್ಯಾನ್ಕಾರ್ಡ್, ಮತದಾರರ ಗುರುತಿನ ಚೀಟಿ, ಪಾರ್ಸ್ಪೋರ್ಟ್ , ಡಿಎಲ್ ,ಎನ್ಪಿಆರ್ ಸ್ಮಾರ್ಟ್ಕಾರ್ಡ್, ಹೀಗೆ ಪೋಟೋ ಹೊಂದಿರುವ ಐಡಿ ನೀಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಮೊದಲ ಡೋಸ್ ಪಡೆದು 29 ನೇ ದಿನದ ಬಳಿಕ ಎರಡನೇ ಡೋಸ್ ಗೆ ಅಪಾಯಿಂಟ್ ಮೆಂಟ್ ಕಾದಿರಿಸಲು ಅವಕಾಶ.
ಬೆಲೆ ಎಷ್ಟು ?:
ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ ಹಾಕಲಾಗುತ್ತದೆ. ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಸೋಮವಾರ , ಬುಧವಾರ, ಶುಕ್ರವಾರ ಮತ್ತು ಶನಿವಾರ ಲಸಿಕೆ ನೀಡಲಾಗುತ್ತದೆ.
ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆದುಕೊಳ್ಳುವವರು 150 ರೂ. ಲಸಿಕಾ ವೆಚ್ಚ ಹಾಗೂ 100 ರೂ. ಸೇವಾ ಶುಲ್ಕ ಸೇರಿ 250 ರೂ. ನೀಡಬೇಕಾಗುತ್ತದೆ.