ನಾಗ್ಪುರ, ಮಾ 01 (DaijiworldNews/MS): ಮದುಮಕ್ಕಳನ್ನು ಆಶೀರ್ವಾದಿಸಲೆಂದು ಬಂದ ಅತಿಥಿಗಳಿಗೆ ,ವಿವಾಹಮಂಟಪವೇ ಕೊವೀಡ್ ತಪಾಸಣಾ ಕೇಂದ್ರವಾಗಿ ಬದಲಾಗಿ ಅಚ್ಚರಿಯನ್ನುಂಟು ಮಾಡಿದ ಘಟನೆ ನಾಗ್ಪುರದ ನರ್ಖೆಡ್ ತಾಲ್ಲೂಕಿನ ಸಾವರ್ಗಾಂವ್ನಲ್ಲಿ ಶನಿವಾರ ನಡೆದಿದೆ.
ಇಲ್ಲಿನ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು, ವಿವಾಹ ಮಂಟಪವೊಂದಕ್ಕೆ ದಿಢೀರ್ ಭೇಟಿ ಮಾಡಿ, ವಧು-ವರರು, ಅಡುಗೆಯವರು, ಚಾಲಕ , ಪುರೋಹಿತರನ್ನು ಸೇರಿದಂತೆ ಎಲ್ಲರ ಮೇಲೂ ಕ್ಷಿಪ್ರ ಆಂಟಿಜೆನ್ ಪರೀಕ್ಷೆ ನಡೆಸಿದ್ದಾರೆ.
ಈ ಬಗ್ಗೆ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ವಿದ್ಯಾನಂದ್ ಗಾಯಕ್ವಾಡ್ ಮಾತನಾಡಿ" ಮದುವೆಯಂತಹ ಕಾರ್ಯಕ್ರಮಗಳು ಕೊರೊನಾ ಸೂಪರ್ ಸ್ಪ್ರೆಡರ್ ತಾಣವಾಗಿ ಮಾರ್ಪಡುತ್ತವೆ. ವಿವಾಹದ ಸ್ಥಳಕ್ಕೆ ಭೇಟಿ ನೀಡುವುದು ಎರಡು ಕಾರಣಗಳಿಗೆ. ಮೊದಲನೆಯದಾಗಿ, ಕೋವಿಡ್ ಹರಡಂದಂತೆ ಕ್ರಮ ಕೈಗೊಳ್ಳಲಾಗಿದೆಯೇ , ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದನ್ನು ಪರಿಶೀಲಿಸಲು. ಹಾಗೂ ವಿವಾಹಗಳಲ್ಲಿ ಸಾಮೂಹಿಕ ಬೆರೆಯುವಿಕೆಯು ಇರುವುದರಿಂದ ಕೊವೀಡ್ ಪರೀಕ್ಷೆಗಳನ್ನು ನಡೆಸುವುದು ಎರಡನೆಯ ಉದ್ದೇಶವಾಗಿತ್ತು".
"ಇಂತಹ ಕ್ರಮವೂ ಸ್ಥಳೀಯ ನಾವೀನ್ಯತೆ ಹೊಂದಿದ್ದು , ಇದನ್ನು ಮಾದರಿಯಾಗಿಸಿ ಕೋವಿಡ್ ಹರಡುವಿಕೆಯನ್ನು ಪರಿಶೀಲಿಸಲು ಬೇರೆಡೆಯೂ ಪುನರಾವರ್ತಿಸಬಹುದು" ಎಂದು ಹೇಳಿದ್ದಾರೆ.
"ಈ ಮದುವೆಯು ಸೂಪರ್ ಸ್ಪ್ರೆಡರ್ ಘಟನೆಯಾಗಿ ಬದಲಾಗುವುದಿಲ್ಲ ಎಂದು ಖಚಿತವಾಗಿದೆ. ಡಾ.ದೇವೇಂದ್ರ ಬಾರೈ, ಸತೀಶ್ ಮೊವಾಡೆ, ಕುಮ್ರೆ, ಜಯಭಾಯೆ ಮತ್ತು ಧುರ್ವೆ ಅವರನ್ನೊಳಗೊಂಡ ತಂಡವು ಮೊದಲು ವಿವಾಹದ ಸ್ಥಳದಲ್ಲಿ ಅತಿಥಿಗಳಿಗೆ ಸಲಹೆ ನೀಡಿ ನಂತರ ಪರೀಕ್ಷೆಗಳನ್ನು ನಡೆಸಿತು. ಎಲ್ಲರ ವರದಿಯೂ ನೆಗೆಟಿವ್ ಆಗಿದ್ದು, ಮಾಸ್ಕ್ ಧರಿಸದೇ ಬಂದ ಅಥಿತಿಗಳಿಗೆ ದಂಡ ವಿಧಿಸಲಾಗಿದೆ" ಎಂದು ಎಂದು ಡಾ.ಗೈಕ್ವಾಡ್ ಹೇಳಿದ್ದಾರೆ.