ಟ್ಯುಟಿಕೋರಿನ್, ಫೆ.28 (DaijiworldNews/MB) : ''ಬಿಜೆಪಿ ಆಡಳಿತದಲ್ಲಿ ಸಂಪತ್ತಿನ ಹಂಚಿಕೆಯಲ್ಲಿ ಅಸಮಾನತೆ ಅಧಿಕವಾಗಿದೆ'' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೂರಿದ್ದಾರೆ.
ತಮಿಳು ನಾಡಿನಲ್ಲಿ ಚುನಾವಣಾ ರ್ಯಾಲಿಯ ವೇಳೆ ಉಪ್ಪು ತಯಾರಿಸುವ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು.
''ಸುಮಾರು ನಾಲ್ಕು ತಿಂಗಳವರೆಗೆ ನಮಗೆ ಯಾವುದೇ ಕೆಲಸವಿಲ್ಲದೆ ಆದಾಯವಿರುವುದಿಲ್ಲ. ಈ ಸಮಯದಲ್ಲಿ ಸರ್ಕಾರ ನಮಗೆ ಆರ್ಥಿಕ ಸಹಾಯ ಮಾಡಬೇಕು'' ಎಂದು ಓರ್ವ ಮಹಿಳೆ ಹೇಳಿದ್ದು, ಈ ವೇಳೆ ಮಾತನಾಡಿದ್ದ ರಾಹುಲ್, ''ಯುಪಿಎ ಸರ್ಕಾರವಿದ್ದ ವೇಳೆ ಈ ಸಮಸ್ಯೆ ಉಂಟಾಗಿಲ್ಲ. ನಾವು ಅದನ್ನು ಬಗೆಹರಿಸುವ ಪ್ರಯತ್ನ ಮಾಡಿದ್ದೇವೆ. ದೇಶದಲ್ಲಿ ಯುಪಿಎ ಸರ್ಕಾರವಿದ್ದಾಗ ಸಮಾನವಾಗಿ ಸಂಪತ್ತಿನ ಹಂಚಿಕೆಯಾಗುತ್ತಿತ್ತು. ಆದರೆ ಈಗ ಬಡವರು ಬಡವರಾಗಿಯೇ ಉಳಿಯುತ್ತಾರೆ. ಶ್ರೀಮಂತರು ಇನ್ನಷ್ಟೂ ಶ್ರೀಮಂತರಾಗುತ್ತಿದ್ದಾರೆ'' ಎಂದು ಹೇಳಿದರು.
''ಯಾವ ರಾಜ್ಯ, ಯಾವ ಧರ್ಮ ಎಂದು ನೋಡದೆ ಬಡವರಿಗಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಷದಲ್ಲಿ 72 ಸಾವಿರ ರೂಪಾಯಿ ನೀಡುವ ಯೋಜನೆಯಿಂದ ಅನೇಕರನ್ನು ಬಡತನದಿಂದ ಹೊರಗೆ ತರಬಹುದು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನ್ಯಾಯ ಯೋಜನೆಯನ್ನು ಜಾರಿಗೆ ತರಲಾಗುವುದು'' ಎಂದು ತಿಳಿಸಿದರು.
''ನಾವು ಕಷ್ಟಪಟ್ಟು ದುಡಿದ ಹಣವನ್ನು ಪುರುಷರು ಮದ್ಯ ಸೇವನೆ ಮಾಡಿ ಹಾಳು ಮಾಡುತ್ತಾರೆ. ಈ ಹಿನ್ನೆಲೆ ಮದ್ಯ ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರಬೇಕು'' ಎಂದು ಕೂಡಾ ಮಹಿಳಾ ಕಾರ್ಮಿಕರು ರಾಹುಲ್ ಅವರಿಗೆ ಒತ್ತಾಯ ಮಾಡಿದರು.