ಗಾಜಿಯಾಬಾದ್, ಫೆ.28 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಉತ್ತರ ಪ್ರದೇಶದ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ಭಾರತೀಯ ಕಿಸಾನ್ ಒಕ್ಕೂಟದ ಮುಖಂಡ ರಾಕೇಶ್ ಟಿಕಾಯತ್ ಮಾರ್ಚ್ನಲ್ಲಿ 5 ರಾಜ್ಯಗಳಿಗೆ ಭೇಟಿ ನೀಡಿ ರೈತರಿಂದ ಬೆಂಬಲ ಪಡೆಯಲಿದ್ದಾರೆ.
ಉತ್ತರಾಖಂಡ, ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ನಡೆಯುವ ರೈತರ ಸಮಾವೇಶಗಳಲ್ಲಿ ರಾಕೇಶ್ ಟಿಕಾಯತ್ ಭಾಗವಹಿಸಲಿದ್ದಾರೆ.
ಮಾರ್ಚ್ನಲ್ಲಿ ಉತ್ತರ ಪ್ರದೇಶದಲ್ಲಿ ಎರಡು ರೈತ ಸಮಾವೇಶಗಳನ್ನು ಆಯೋಜಿಸಲಾಗಿದ್ದು, ಆ ಕಾರ್ಯಕ್ರಮಗಳಲ್ಲೂ ಅವರು ಪಾಲ್ಗೊಳುವರು ಎಂದು ಭಾರತೀಯ ಕಿಸಾನ್ ಒಕ್ಕೂಟದ ಪದಾಧಿಕಾರಿ ಧರ್ಮೇಂದ್ರ ಮಲಿಕ್ ತಿಳಿಸಿದ್ದಾರೆ.
ಇನ್ನು "ಕೊನೆಯ ಮೂರು ಸಮಾವೇಶಗಳು ಮಾರ್ಚ್ 20, 21 ಮತ್ತು 22ರಂದು ಕರ್ನಾಟಕದಲ್ಲಿ ನಡೆಯಲಿದ್ದು, ತೆಲಂಗಾಣದಲ್ಲಿ ಮಾರ್ಚ್ 6ರಂದು ಸಮಾವೇಶ ನಿಗದಿಯಾಗಿದ್ದು, ಅಲ್ಲಿ ಚುನಾವಣೆ ಇರುವುದರಿಂದ ಇನ್ನೂ ಅನುಮತಿ ಸಿಕ್ಕಿಲ್ಲ. ಅನುಮತಿ ನೀಡಿದರೆ, ನಿಗದಿಯಂತೆ ತೆಲಂಗಾಣದಲ್ಲಿ ಸಭೆ ನಡೆಸಲಾಗುವುದು" ಎಂದು ತಿಳಿಸಿದ್ದಾರೆ.