ನವದೆಹಲಿ, ಫೆ.28 (DaijiworldNews/HR): "ಮುಂಗಾರು ಹಂಗಾಮು ಆರಂಭವಾಗುವುದರೊಳಗೆ ನಮ್ಮ ಸುತ್ತಮುತ್ತಲಿನ ಜಲಮೂಲಗಳನ್ನು ಸ್ವಚ್ಛಗೊಳಿಸಿ, ಮಳೆ ನೀರು ಹಿಡಿಯಲು ಅಣಿಗೊಳಿಸಬೇಕು" ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಈ ಕುರಿತು ರಾಷ್ಟ್ರೀಯ ವಿಜ್ಞಾನ ದಿನದಂದು ಮನ್ ಕಿ ಬಾತ್ ರೆಡಿಯೊ ಕಾರ್ಯಕ್ರಮದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, "ಜಲಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸಲು ಕೇಂದ್ರ ಜಲಶಕ್ತಿ ಸಚಿವಾಲಯ 'ಕ್ಯಾಚ್ ದಿ ರೈನ್' ಅಭಿಯಾನ ಆರಂಭಿಸುತ್ತಿದ್ದು, ಬಿದ್ದ ಜಾಗದಲ್ಲೇ, ಬಿದ್ದ ಸಮಯದಲ್ಲೇ ಮಳೆ ನೀರನ್ನು ಹಿಡಿದು ಸಂಗ್ರಹಿಸಬೇಕು ಎಂಬುದನ್ನು ತಿಳಿಸುವುದು ಅಭಿಯಾನದ ಉದ್ದೇಶವಾಗಿದೆ" ಎಂದರು.
"ಮುಂಗಾರು ಹಂಗಾಮಿಗೆ ಮುನ್ನ ಎಲ್ಲ ಜಲಮೂಲಗಳನ್ನು ಸ್ವಚ್ಛಗೊಳಿಸಿ, ಮಳೆ ನೀರು ಸಂಗ್ರಹಕ್ಕಾಗಿ ಅಣಿಗೊಳಿಸುವುದಕ್ಕಾಗಿ ನೂರು ದಿನಗಳ ಸಾರ್ವಜನಿಕ ಅಭಿಯಾನ ನಡೆಸಬಹುದೇ" ಎಂದಿದ್ದಾರೆ.
"ಶತಮಾನಗಳಿಂದ ಮನುಕುಲದ ಅಭಿವೃದ್ಧಿಯಲ್ಲಿ ನೀರಿನ ಪಾತ್ರ ಬಹಳ ನಿರ್ಣಾಯಕವಾಗಿದ್ದು, ಜಲಸಂರಕ್ಷಣೆಯ ಬಗ್ಗೆ ಸಾಮೂಹಿಕ ಜವಾಬ್ದಾರಿಯನ್ನು ನಾವು ಅರ್ಥಮಾಡಿಕೊಳ್ಳಬೇಕು. ಮೇ-ಜೂನ್ ವೇಳೆಗೆ ದೇಶದ ಹಲವು ಭಾಗಗಳಲ್ಲಿ ಮುಂಗಾರು ಆರಂಭವಾಗಲಿದ್ದು, ಅಷ್ಟರೊಳಗೆ ಜಲಮೂಲಗಳ ಸ್ವಚ್ಛತಾ ಕಾರ್ಯ ಪೂರ್ಣಗೊಂಡಿರಬೇಕು" ಎಂದು ಕರೆ ನೀಡಿದ್ದಾರೆ.
ಇನ್ನು "ಸ್ಥಳೀಯ ಉತ್ಪನ್ನಗಳ ಬಗ್ಗೆ ಜನರು ಹೆಮ್ಮೆಪಡುವಾಗ ಆತ್ಮನಿರ್ಭರ ಭಾರತ್ ಕೇವಲ ಆರ್ಥಿಕ ಕಾರ್ಯಕ್ರಮವಾಗಿ ಅಷ್ಟೇ ಉಳಿದೇ, ರಾಷ್ಟ್ರೀಯ ಮನೋಭಾವವಾಗಿಯೂ ಬದಲಾಗುತ್ತದೆ" ಎಂದು ಹೇಳಿದ್ದಾರೆ.