ಮುಂಬೈ, ಫೆ.28 (DaijiworldNews/MB) : ಉದ್ಯಮಿ ಮುಖೇಶ್ ಅಂಬಾನಿ ಮನೆ ಹತ್ತಿರ ಸ್ಫೋಟಕ ತುಂಬಿದ ಕಾರು ಪತ್ತೆಯಾದ ಪ್ರಕರಣಕ್ಕೆ ಮತ್ತೊಂದು ತಿರುವು ಲಭಿಸಿದ್ದು ಉದ್ಯಮಿ ಅಂಬಾನಿ ನಿವಾಸದ ಬಳಿ ಸ್ಫೋಟಕಗಳನ್ನು ಇಟ್ಟಿರುವ ಹೊಣೆಯನ್ನು ಜೈಶ್-ಉಲ್-ಹಿಂದ್ ಉಗ್ರ ಸಂಘಟನೆ ಹೊತ್ತಿದ್ದು ಈ ಬಗ್ಗೆ ಟೆಲಿಗ್ರಾಮ್ ಅಪ್ಲಿಕೇಶನ್ನ ಸಂದೇಶದ ಮೂಲಕ ತಿಳಿಸಿದೆ.
ಉದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸ ಅಂಟಲಿಯಾ ಬಳಿ ಗುರುವಾರ ಪತ್ತೆಯಾದ ಸ್ಪೋಟಕ ತುಂಬಿದ್ದ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸದಂತೆ ಅಪರಿಚಿತ ವ್ಯಕ್ತಿಗಳ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ. ಆದರೆ ಆ ಸ್ಥಳದಲ್ಲೇ ಮತ್ತೊಂದು ಕಾರನ್ನು ಪೊಲೀಸರು ನೋಡಿರುವುದಾಗಿ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದರು.
ಇದೀಗ ಇದರ ಹೊಣೆ ಹೊತ್ತಿರುವ ಜೈಶ್-ಉಲ್-ಹಿಂದ್, ಅಂಬಾನಿ ಮನೆಯ ಬಳಿ ಸ್ಫೋಟಕಗಳಿದ್ದ ಎಸ್ಯುವಿ ಇರಿಸಿದ ಸಹೋದರ ಸುರಕ್ಷಿತವಾಗಿ ಮನೆಗೆ ತಲುಪಿದ್ದಾನೆ. ಇದು ಕೇವಲ ಟ್ರೇಲರ್, ಬಿಗ್ ಸಿನಿಮಾ ಇನ್ನಷ್ಟೇ ಬರಲಿದೆ ಎಂದೂ ಹೇಳಿದೆ. ಇನ್ನು ಜೈಶ್-ಉಲ್-ಹಿಂದ್ ಮುಖೇಶ್ ಅಂಬಾನಿ ಬಳಿ ಬಿಟ್ ಕಾಯಿನ್ ಮೂಲಕ ಹಣಕ್ಕಾಗಿ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಈವರೆಗೂ ಮುಂಬೈ ಪೊಲೀಸರಿಂದ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.