ವಿಜಯಪುರ, ಫೆ.28 (DaijiworldNews/MB) : "ನಾನು ಬೆಳಗಾವಿಯಿಂದ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಲು ಆಸಕ್ತಿ ಹೊಂದಿದ್ದೇನೆ. ಈ ಸಂಬಂಧ ನಾನು ಈಗಾಗಲೇ ಬಿಜೆಪಿಯ ಎಲ್ಲ ಹಿರಿಯ ಮುಖಂಡರನ್ನು ಭೇಟಿ ಮಾಡಿ ವಿನಂತಿ ಮಾಡಿದ್ದೇನೆ ಎಂದು ಶ್ರೀ ರಾಮ ಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ಶ್ರೀ ಚತ್ರಪತಿ ಶಿವಾಜಿ ಪ್ರತಿಷ್ಠಾನದ ನಾಯಕ ಕಿರಣ್ ಅವರು ಆಯೋಜಿಸಿದ್ದ ಶ್ರೀ ರಾಜ ಚತ್ರಪತಿ ಶಿವಾಜಿಯ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುತಾಲಿಕ್ ಮಾತನಾಡಿದರು.
"ಹಿಂದುತ್ವ ಮತ್ತು ಅಭಿವೃದ್ಧಿಗೆ ಸೇವೆ ಸಲ್ಲಿಸುವ ಸಲುವಾಗಿ ನನಗೆ ಟಿಕೆಟ್ ನೀಡುವಂತೆ ನಾನು ಬಿಜೆಪಿ ನಾಯಕರನ್ನು ಕೋರಿದ್ದೇನೆ. ನಾನು ಇಲ್ಲಿಯವರೆಗೆ ಭೇಟಿಯಾದ ಎಲ್ಲಾ ಬಿಜೆಪಿ ನಾಯಕರು ನನ್ನೊಂದಿಗೆ ಸಕಾರಾತ್ಮಕವಾಗಿ ಮಾತನಾಡಿದ್ದಾರೆ. ಟಿಕೆಟ್ ಇನ್ನೂ ಘೋಷಣೆಯಾಗಿಲ್ಲ. ಯಾರಿಗೆ, ಯಾವಾಗ ಟಿಕೆಟ್ ನೀಡಲಾಗುವುದು ಎಂದು ನನಗೆ ಗೊತ್ತಿಲ್ಲ. ಬಿಜೆಪಿ ನನಗೆ ಟಿಕೆಟ್ ನೀಡದಿದ್ದರೆ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ. ಅವರು ನನಗೆ ಟಿಕೆಟ್ ನೀಡಿದರೆ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಇಲ್ಲದಿದ್ದರೆ ನಾನು ನನ್ನ ಸಂಘದಲ್ಲಿ ಕೆಲಸ ಮಾಡುತ್ತೇನೆ. ಬಿಜೆಪಿಯಿಂದ ಬೇರೆ ಯಾರೇ ನಿಂತರೂ ನಾನು ಅವರಿಗಾಗಿ 100% ಕೆಲಸ ಮಾಡುತ್ತೇನೆ. ನನ್ನ ಆರಾಧ್ಯರಾದ ಪ್ರಧಾನಿ ಮೋದಿ ಅವರ ಕಾರಣದಿಂದಾಗಿ ನಾನು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದೇನೆ. ಇವರೆಗೆ ನನಗೆ ಬಿಜೆಪಿ ಸದಸ್ಯತ್ವ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ, ಅಗತ್ಯವಿದ್ದರೆ ನಾನು ಅದನ್ನೂ ಪಡೆಯುತ್ತೇನೆ" ಎಂದು ಹೇಳಿದರು.
''ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವ ವಿಚಾರದಲ್ಲಿ ಮುತಾಲಿಕ್ ಅವರು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. "ಇಬ್ಬರೂ ಮಾಜಿ ಮುಖ್ಯಮಂತ್ರಿಗಳಾಗಿದ್ದರು. ಇಬ್ಬರ ಹೇಳಿಕೆಗಳು ಬಾಲಿಶವಾಗಿವೆ. ಈ ಹೇಳಿಕೆಗಳು ಅವರ ಸ್ಥಾನಮಾನಕ್ಕೆ ಸರಿಹೊಂದುವುದಿಲ್ಲ. ದೇಶದಲ್ಲಿ 130 ಕೋಟಿ ರಾಮ ಭಕ್ತರಿದ್ದಾರೆ. ಈ ಎರಡೂ ಮಾಜಿ ಸಿಎಂಗಳು ರಾಮನ ಭಕ್ತರನ್ನು ಅವಮಾನಿಸುತ್ತಿದ್ದಾರೆ. ಅವರು ಬಿಜೆಪಿ ಹಾಗೂ ಆರ್ಎಸ್ಎಸ್ ವಿರುದ್ದ ವಾಗ್ದಾಳಿ ನಡೆಸುವ ನೆಪದಲ್ಲಿ ರಾಮನನ್ನು ಅವಮಾನಿಸುತ್ತಿದ್ದಾರೆ. ಸಿದ್ದರಾಮಯ್ಯನ ಹೆಸರಿನಲ್ಲಿ ರಾಮ ಇದ್ದಾರೆ. ಆ ನಿಟ್ಟಿನಲ್ಲಾದರೂ ಭಗವಾನ್ ರಾಮನಿಗೆ ಗೌರವ ನೀಡಿ'' ಎಂದು ವಾಗ್ದಾಳಿ ನಡೆಸಿದರು.
''ವಿವಿಧ ಸಮುದಾಯಗಳ ಮೀಸಲಾತಿ ಬೇಡಿಕೆಯ ಕುರಿತು ಪ್ರತಿಕ್ರಿಯಿಸಿದ ಮುತಾಲಿಕ್, "ಅಂಬೇಡ್ಕರ್ ಇಂದಿನ ಪರಿಸ್ಥಿತಿಯನ್ನು ಮೊದಲೇ ಊಹಿಸಿದ್ದರು. ಕೇವಲ 10 ವರ್ಷಗಳವರೆಗೆ ಮಾತ್ರ ಮೀಸಲಾತಿ ನೀಡುವಂತೆ ಹೇಳಿದ್ದರು. ಈಗ ನಾವು ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳುತ್ತಿದ್ದೇವೆ. ವಿವಿಧ ಸಮುದಾಯಗಳ ಬೇಡಿಕೆಗಳ ಬಗ್ಗೆ ನಾನು ಅಧ್ಯಯನ ಮಾಡಬೇಕಾಗಿದೆ. ಹಿಂದೂ ಸಮಾಜವು ಒಂದಾಗಬೇಕು. ಕಾನೂನು ಬಡ ಜನರಿಗೆ ಅನುಕೂಲಕರವಾಗಿರಬೇಕು" ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗೋಹತ್ಯೆ ವಿರೋಧಿ ಮಸೂದೆ ಮತ್ತು ಗೋಮಾಂಸ ತಿನ್ನುವುದರ ಕುರಿತು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಮುತಾಲಿಕ್, "ಹಸು ಯಾವುದೇ ಜಾತಿ, ಪಕ್ಷ ಅಥವಾ ಸಂಘಟನೆಗೆ ಸೀಮಿತವಾಗಿಲ್ಲ. ಇದು ದೇಶದ ಕೃಷಿಕರಿಗೆ ಸಂಬಂಧಿಸಿದ ವಿಷಯವಾಗಿದೆ. ಹಸು ಪೂಜಿಸಬೇಕಾದ ಪ್ರಾಣಿಯಲ್ಲ. ಇದು ನಮಗೆ ತಿನ್ನಲು ಅನ್ನವನ್ನು ನೀಡುತ್ತಿದೆ. ಆರ್ಥಿಕವಾಗಿ ನಮಗೆ ಸಹಾಯ ಮಾಡುತ್ತದೆ. ಇದು ನಮಗೆ ಗೊಬ್ಬರ ಮತ್ತು ಔಷಧಿಯನ್ನು ನೀಡುತ್ತಿದೆ. ಹಸು ಕಾಮಧೇನು, ಇದನ್ನು ಸಂವಿಧಾನದ 48 ನೇ ವಿಧಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಕೃಷಿಗೆ ಅಗತ್ಯವಾದ ದನಗಳನ್ನು ರಕ್ಷಿಸುವುದು ಕರ್ತವ್ಯವಾಗಿದೆ. ಸಿದ್ದರಾಮಯ್ಯ ಅವರು ಸಂವಿಧಾನದ ವಿರುದ್ಧ ಮಾತನಾಡುವುದು ಸರಿಯಲ್ಲ. ಮುಸ್ಲಿಮರನ್ನು ಓಲೈಕೆ ಮಾಡಲೆಂದು ಹೇಳಿಕೆಗಳನ್ನು ನೀಡುವುದು ಸರಿಯಲ್ಲ'' ಎಂದು ಹೇಳಿದರು.