ಬೆಂಗಳೂರು, ಫೆ.28 (DaijiworldNews/MB) : ಕೊರೊನಾ ಕಾರಣದಿಂದಾಗಿ ರದ್ದಾಗಿದ್ದ ಗೋಲ್ಡನ್ ಚಾರಿಯೆಟ್ ಐಷಾರಾಮಿ ಪ್ರವಾಸಿ ರೈಲು ಸಂಚಾರ ಮಾರ್ಚ್ 14 ರಿಂದ ಪುನರ್ ಆರಂಭವಾಗಲಿದ್ದು ಈ ಬಾರಿ ಈ ರೈಲಿನಲ್ಲಿ ಪ್ರವಾಸ ಮಾಡುವವರಿಗೆ ವಿಶೇಷ ಆಫರ್ ನೀಡಲಾಗಿದೆ.
ರಾಜ್ಯದಲ್ಲಿ 2008ರಲ್ಲಿ ಶುರುವಾಗಿರುವ ಗೋಲ್ಡನ್ ಚಾರಿಯೆಟ್ ರೈಲು ಕೇಂದ್ರ ಸರ್ಕಾರದ ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಪ್ರಾರಂಭ ಮಾಡಲಾಗಿರುವ ಈ ರೈಲಿನ ಉಸ್ತುವಾರಿಯನ್ನು ರೈಲ್ವೆ ಕೇಟರಿಂಗ್ ಆ್ಯಂಡ್ ಟೂರಿಸಂ ವಹಿಸಿಕೊಂಡಿದೆ
ಕೊರೊನಾ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಈ ಸೇವೆಯು ಮಾರ್ಚ್ 14 ರಿಂದ ಮತ್ತೆ ಆರಂಭವಾಗಲಿದ್ದು ಈ ರೈಲಿನಲ್ಲಿ ಪ್ರವಾಸ ಮಾಡುವವರಿಗೆ ಬೆಂಗಳೂರು-ಛಂಡೀಗಢ್ ವಿಮಾನಯಾನಕ್ಕೆ ಉಚಿತವಾಗಿ ಟಿಕೆಟ್ ಕೂಡಾ ನೀಡಲಾಗುತ್ತದೆ. ಒಟ್ಟು ಮೂರು ಪ್ಯಾಕೇಜ್ಗಳು ಇರಲಿದೆ.
ಪ್ರೈಡ್ ಆಫ್ ಕರ್ನಾಟಕ ಪ್ಯಾಕೇಜ್
ಮಾರ್ಚ್ 14 ರಂದು ಬೆಂಗಳೂರು ಯಶವಂತಪುರ ರೈಲ್ವೆ ನಿಲ್ದಾಣದಿಂದ ಗೋಲ್ಡನ್ ಚಾರಿಯೆಟ್ ಹೊರಡಿ ಅಲ್ಲಿಂದ ಬಂಡೀಪುರಕ್ಕೆ ಪ್ರಯಾಣಿಸಲಿದೆ. ಬಳಿಕ ಸಂಜೆ 4:30 ಯಿಂದ 6:30 ವರೆಗಿನ ಸಫಾರಿ ಅಂತ್ಯಗೊಂಡ ನಂತರ ಭೋಜನ ಲಭಿಸಲಿದೆ. ಬಳಿಕ ರೈಲು ಮಧ್ಯರಾತ್ರಿ ಮೈಸೂರಿಗೆ ತಲುಪಿ ಸೋಮವಾರ ಬೆಳಗ್ಗಿನ ತಿಂಡಿಯ ಬಳಿಕ ಮೈಸೂರು ಅರಮನೆ ದರ್ಶನ ಮಾಡಬಹುದಾಗಿದೆ. ಸಂಜೆ ಶ್ರೀರಂಗಪಟ್ಟಣಕ್ಕೆ ರೈಲು ಪ್ರಯಾಣ ಬೆಳೆಸಲಿದೆ. ಮೂರನೇ ದಿನ ಮಂಗಳವಾರ ಹಳೇಬೀಡು, ಬುಧವಾರ ಹಂಪಿ, ಐದನೇ ದಿನ ಬಾದಾಮಿ ಗುಹೆಗಳಿಗೆ ಪ್ರಯಾಣ ಮಾಡಲಿದೆ. ಈ ವೇಳೆ ಪಟ್ಟದಕಲ್ಲು, ಐಹೊಳೆಯನ್ನು ಕೂಡಾ ನೋಡಬಹುದಾಗಿದೆ. ಆರನೇ ದಿನವಾದ ಶುಕ್ರವಾರ ರೈಲು ಗೋವಾಕ್ಕೆ ತೆರಳಲಿದ್ದು, ಅಲ್ಲಿ ಉತ್ತರ ಗೋವಾದ ಚರ್ಚ್, ಮ್ಯೂಸಿಯಂಗಳಿಗೆ ತೆರಳಿ ಬಳಿಕ ಏಳನೇ ದಿನ ಬೆಂಗಳೂರಿಗೆ ವಾಪಾಸ್ ಬರಲಿದೆ.
ಜ್ಯುವೆಲ್ಸ್ ಆಫ್ ಸೌತ್
ಮಾರ್ಚ್ 14 ರಂದು ಬೆಂಗಳೂರಿನಿಂದ ರೈಲು ಹೊರಟು ಮೈಸೂರಿಗೆ ತಲುಪಿ ಸೋಮವಾರ ಅಲ್ಲಿಂದ ಹಂಪಿ, ಮಂಗಳವಾರ ತಮಿಳುನಾಡಿನ ಮಹಾಬಲಿಪುರಂ, ಬುಧವಾರ ತಂಜಾವೂರು, ಚೆಟ್ಟಿನಾಡ್, ಗುರುವಾರ ಕೊಚ್ಚಿನ್, ಶುಕ್ರವಾರ ಕುಮಾರ್ಕೋಮ್ಗೆ ಪ್ರವಾಸ ಮಾಡಿ, ಶನಿವಾರ ಬೆಂಗಳೂರಿಗೆ ವಾಪಸ್ ತೆರಳಲಿದೆ.
ಗ್ಲಿಮ್ಸಸ್ ಆಫ್ ಕರ್ನಾಟಕ
ಭಾನುವಾರ ಬೆಂಗಳೂರಿನಿಂದ ರೈಲು ಬಂಡೀಪುರಕ್ಕೆ ಹೊರಡಲಿದ್ದು ಸೋಮವಾರ ಮೈಸೂರು, ಮಂಗಳವಾರ ಹಂಪಿಗೆ ಹೋಗಿ ಬುಧವಾರ ಬೆಂಗಳೂರಿಗೆ ಹಿಂದಿರುಗಲಿದೆ. ಮೂರು ರಾತ್ರಿ, ನಾಲ್ಕು ಹಗಲುಗಳ ಪ್ರಯಾಣ ಇದಾಗಲಿದೆ.