ಆಗ್ರಾ, ಫೆ.28 (DaijiworldNews/MB) : ಬೇರೆ ಜಾತಿಯ ಪ್ರೇಯಸಿಯ ಭೇಟಿಯಾಗಲು ಹೋದ 22 ವರ್ಷದ ದಲಿತ ಯುವಕನಿಗೆ ಆತನ ಗೆಳತಿಯ ಕುಟುಂಬ ಸದಸ್ಯರು ಥಳಿಸಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯು ಸಾವನ್ನಪ್ಪಿದ್ದಾನೆ. ಮಹಿಳೆಯ ಕುಟುಂಬದ ಐವರು ಸದಸ್ಯರನ್ನು ಬಂಧಿಸಲಾಗಿದೆ ಎಂದು ಕೂಡಾ ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಮೃತ ಪವನ್ ಕುಮಾರ್, ಮತ್ತೊಂದು ಜಾತಿಗೆ ಸೇರಿದ 20 ವರ್ಷದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ. ಯುವತಿಯು ಶುಕ್ರವಾರ, ಪವನ್ ಕುಮಾರ್ ಅವರನ್ನು ತಡರಾತ್ರಿ ಭೇಟಿಯಾಗಲು ಕರೆ ಮಾಡಿದ್ದಳು. ಆಕೆಯ ಮನೆಯಲ್ಲಿದ್ದ ಆತನಿಗೆ ಆಕೆಯ ಕುಟುಂಬಸ್ಥರು ಥಳಿಸಿದ್ದಾರೆ. ಆತನ ಕಿರುಚಾಟ ಕೇಳಿದ ಸ್ಥಳೀಯರು ಆತನನ್ನು ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದರು.
ಈ ಬಗ್ಗೆ ಮಾಹಿತಿ ನೀಡಿದ ಕುಮಾರ್ನ ಸಹೋದರ ಆಕಾಶ್, "ನಮಗೆ ಶನಿವಾರ ಘಟನೆಯ ಬಗ್ಗೆ ಮಾಹಿತಿ ಲಭಿಸಿದೆ. ಅವನು ಪೊಲೀಸ್ ವ್ಯಾನ್ ಒಳಗೆ ಮಲಗಿರುವುದನ್ನು ನಾವು ಕಂಡಿದ್ದೇವೆ. ಅವನನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಲ್ಲಿ ಆತ ಸಾವನ್ನಪ್ಪಿದ. ಸಾಯುವ ಮೊದಲು, ಆತ ನಡೆದ ಎಲ್ಲಾ ಸಂಗತಿಯನ್ನು ಪೊಲೀಸರಿಗೆ ತಿಳಿಸಿದ್ದಾನೆ. ಆತನನ್ನು ಆ ಯುವತಿ ತನ್ನ ಮನೆಗೆ ಕರೆದಿದ್ದು ಆಕೆಯ ಕುಟುಂಬಸ್ಥರು ಕ್ರೂರವಾಗಿ ಥಳಿಸಿದ್ದಾರೆ'' ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮುಖೇಶ್ ಚಂದ್ರ ಮಿಶ್ರಾ ಮಾತನಾಡಿ, "ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಮಹಿಳೆಯ ತಂದೆ ಮತ್ತು ಇತರ ಐದು ಕುಟುಂಬ ಸದಸ್ಯರು ಸೇರಿದಂತೆ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಐವರನ್ನು ಬಂಧಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ" ಎಂದು ತಿಳಿಸಿದರು.
ರಸೂಲ್ಪುರ ಎಸ್ಎಚ್ಒ ಫತೇ ಬಹದ್ದೂರ್ ಭದೌರಿಯಾ, "ಯುವಕನನ್ನು ಕಟ್ಟಿಹಾಕಿ ಕೋಲುಗಳಿಂದ ಹೊಡೆದಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಯುವತಿಯ ತಂದೆ ಮತ್ತು ಇತರ ಸಂಬಂಧಿಕರು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಮಹಿಳೆ ಮತ್ತು ಇತರ ನಾಲ್ವರನ್ನು ಜೈಲಿಗೆ ಕಳುಹಿಸಲಾಗಿದೆ. ಇನ್ನಿಬ್ಬರು ಪರಾರಿಯಾಗಿದ್ದಾರೆ" ಎಂದು ಹೇಳಿದರು.
ಕುಮಾರ್ ಮತ್ತು ಯುವತಿಗೆ ಪರಸ್ಪರ ಪರಿಚಯವಿದ್ದು ಹಲವಾರು ತಿಂಗಳುಗಳಿಂದ ಅವರು ಫೋನ್ನಲ್ಲಿ ಸಂಪರ್ಕದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ. ಯುವತಿಯ ಕುಟುಂಬವು ಅವರ ಸ್ನೇಹಕ್ಕೆ ವಿರುದ್ಧವಾಗಿತ್ತು. ಕುಮಾರ್ನಿಂದ ದೂರವಿರಲು ಯುವತಿಗೆ ಎಚ್ಚರಿಕೆ ನೀಡಿತ್ತು ಎಂದು ಹೇಳಲಾಗಿದೆ.