ಬೆಂಗಳೂರು, ಫೆ.28 (DaijiworldNews/MB) : ''ಮುಂದಿನ ಮೂರು ವರ್ಷಗಳಲ್ಲಿ ಭಾರತವು ಔಷಧ ಮತ್ತು ವೈದ್ಯಕೀಯ ಉಪಕರಣಗಳ ತಯಾರಿಕೆಯಲ್ಲಿ ಸ್ವಾವಲಂಬಿಯಾಗಲಿದೆ'' ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಹೇಳಿದರು.
ನಗರದ ಆರ್ಆರ್ ಇನ್ಸ್ಟಿಟ್ಯೂಟ್ ಮತ್ತು ಲಯನ್ಸ್ ಕ್ಲಬ್ ಶನಿವಾರ ಆಯೋಜಿಸಿದ್ದ ಜನೌಷಧಿ ತರಣೆ ಮತ್ತು ರಕ್ತದಾನ ಶಿಬಿರವನ್ನುದ್ದೇಶಿಸಿ ಮಾತನಾಡಿದ ಅವರು, ''ಮುಂದಿನ ಮೂರು ವರ್ಷಗಳಲ್ಲಿ ಔಷಧ ಮತ್ತು ವೈದ್ಯಕೀಯ ಉಪಕರಣಗಳ ತಯಾರಿಕೆಯಲ್ಲಿ ಸ್ವಾವಲಂಬಿಗಳಾಗುವ ಕಾರ್ಯಕ್ರಮವನ್ನು ನರೇಂದ್ರ ಮೋದಿ ಸರ್ಕಾರ ಕೈಗೊಂಡಿದೆ. ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ'' ಎಂದು ಹೇಳಿದರು.
''ಭಾರತವು ಜೆನೆರಿಕ್ ಔಷಧಿಗಳ ಮೂರನೇ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದೆ, ಕೋವಿಡ್ 19 ಸಾಂಕ್ರಾಮಿಕ ಅವಧಿಯಲ್ಲಿ 120 ದೇಶಗಳಿಗೆ ಹೈಡ್ರಾಕ್ಸಿಕೋಲೋರೊಕ್ವಿನ್, ಪ್ಯಾರಾಸಿಟಮಲ್ ಮತ್ತು ಇತರ ಅಗತ್ಯ ಔಷಧಿಗಳನ್ನು ಪೂರೈಸುವಲ್ಲಿ ದೇಶವು ಯಶಸ್ವಿಯಾಗಿದೆ'' ಎಂದು ಹೇಳಿದರು.
''ಆದಾಗ್ಯೂ, ಹೆಚ್ಚಿನ ಔಷಧಿಗಳ ತಯಾರಿಕೆಗೆ ಎಪಿಐ, ಕೆಎಸ್ಎಮ್ನಂತಹ ಮೂಲ ರಾಸಾಯನಿಕಗಳಿಗಾಗಿ ದೇಶವು ಚೀನಾವನ್ನು ಅವಲಂಬಿಸಿತ್ತು. ಇದರ ಪರಿಣಾಮವಾಗಿ, ಸಮಸ್ಯೆಗಳನ್ನು ಪರಿಹರಿಸಲು ದೇಶವು ಮೂರು ಬೃಹತ್ ಔಷಧ ಉತ್ಪಾದನಾ ಕೈಗಾರಿಕಾ ಸಮೂಹಗಳನ್ನು ಸ್ಥಾಪಿಸಿದೆ. ಭಾರತವು ದೇಶದಲ್ಲಿ ಶೇಕಡಾ 85 ರಷ್ಟು ವೈದ್ಯಕೀಯ ಉಪಕರಣಗಳನ್ನು ತಯಾರಿಸುವ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಈ ಎಲ್ಲಾ ಪ್ರಯತ್ನಗಳು ಫಲ ನೀಡಲು ಕನಿಷ್ಠ ಮೂರು ವರ್ಷಗಳು ಬೇಕಾಗುತ್ತದೆ'' ಎಂದು ಅವರು ಹೇಳಿದರು.
''2021-22ರ ಬಜೆಟ್ನಲ್ಲಿ ಉತ್ಪಾದನಾ ಕ್ಷೇತ್ರಕ್ಕೆ ಪ್ರೋತ್ಸಾಹ ಧನವಾಗಿ 1.19 ಲಕ್ಷ ಕೋಟಿ ರೂ. ಇರಿಸಲಾಗಿದ್ದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯಕ್ಕೆ 50,000 ಕೋಟಿ ರೂ. ನೀಡಲಾಗಿದೆ" ಎಂದರು.
''ಕರ್ನಾಟಕದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರಗಳನ್ನು ತೆರೆಯಲು ಕೇಂದ್ರವು ಉತ್ಸುಕವಾಗಿದೆ ಮತ್ತು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರೊಂದಿಗೆ ಈ ಬಗ್ಗೆ ಈಗಾಗಲೇ ಚರ್ಚಿಸಿದ್ದೇನೆ'' ಎಂದು ತಿಳಿಸಿದರು.
ಆರ್ಆರ್ ಕಾಲೇಜು ಸಿದ್ಧಪಡಿಸಿದ ರಕ್ತದಾನಿಗಳು ಆ್ಯಪ್ ಅನ್ನು ಸಚಿವರು ಬಿಡುಗಡೆ ಮಾಡಿದರು. ಆರ್.ಆರ್ ಕಾಲೇಜು ನಿರ್ವಹಣಾ ಸಮಿತಿ ಅಧ್ಯಕ್ಷ ರಾಜಾ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಸ್.ಮುನಿರಾಜು ಮತ್ತು ಲಯನ್ಸ್ ಜಿಲ್ಲಾ ಗವರ್ನರ್ ರಾಘವೇಂದ್ರ ಮತ್ತು ಇತರ ಪದಾಧಿಕಾರಿಗಳು ಭಾಗವಹಿಸಿದ್ದರು.