ನವದೆಹಲಿ, ಫೆ.27 (DaijiworldNews/MB) : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ಮಾರ್ಚ್ 15ರಿಂದ ನವೆಂಬರ್ 11ರವರೆಗೆ ಸರಣಿ ಆಂದೋಲನ ನಡೆಸಲು ಆರ್ಎಸ್ಎಸ್ ಅಂಗಸಂಸ್ಥೆ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ನಿರ್ಧರಿಸಿದೆ.
ಶುಕ್ರವಾರ ಹೈದರಾಬಾದ್ನಲ್ಲಿ ಬಿಎಂಎಸ್ನ ಪಿಎಸ್ಯುಎಸ್ ಸಮನ್ವಯ ಸಮಿತಿಯ ಎರಡು ದಿನಗಳ ಸಭೆಯು ಅಂತ್ಯಗೊಂಡಿದ್ದು ಈ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಪಿಎಸ್ಯುಗಳ ವಿರುದ್ಧ ಸರ್ಕಾರ ಬಜೆಟ್ನಲ್ಲಿ ತೋರಿರುವ ಅಸಡ್ಡೆಯ ಕುರಿತು ಚೆನ್ನೈನಲ್ಲಿ ಬಿಎಂಎಸ್ ರಾಷ್ಟ್ರೀಯ ಕಾರ್ಯಕಾರಿಣಿ ನಡೆದ ಹತ್ತು ದಿನಗಳ ನಂತರ ಹೈದರಾಬಾದ್ನಲ್ಲಿ ಈ ಸಭೆ ನಡೆಸಲಾಗಿದೆ. ಈ ಆಂದೋಲನವನ್ನು ಸಾರ್ವಜನಿಕ ವಲಯದ ಘಟಕಗಳಿಗೆ (ಪಿಎಸ್ಯುಎಸ್) ಬಂಡವಾಳ ಹಿಂತೆಗೆತ ನೀತಿಯ ವಿರುದ್ದವಾಗಿ ಮಾಡಲಾಗುವುದು ಶನಿವಾರ ಪ್ರಕಟಿಸಿದೆ.
ಮೊದಲ ಹಂತದಲ್ಲಿ ಮಾರ್ಚ್ 15ರಿಂದ ಏಪ್ರಿಲ್ 14 ರವರೆಗೆ ವಿಚಾರ ಸಂಕಿರಣ, ಮೇ ತಿಂಗಳಲ್ಲಿ ಘಟಕ ಮಟ್ಟದ ಕಾರ್ಯಾಗಾರಗಳು, ಜೂನ್ 14ರಿಂದ ಜೂನ್ 20ರವರೆಗೆ ಸಾಮೂಹಿಕ ಜಾಗೃತಿ ಅಭಿಯಾನ ನಡೆಯಲಿದೆ. ನಾಲ್ಕನೇ ಹಂತದ ಆಂದೋಲನವಾಗಿ ಜುಲೈ 15ರಂದು ಘಟಕ ಮಟ್ಟದ ಸಾಮೂಹಿಕ ಧರಣಿ, ಐದನೇ ಹಂತವಾಗಿ ಸೆ.20 ಮತ್ತು ಸೆ.30ರ ನಡುವೆ ರಾಜ್ಯಮಟ್ಟದ ಸಮಾವೇಶಗಳನ್ನು ನಡೆಸಲಾಗುತ್ತಿದೆ. ಆರನೇ ಮತ್ತು ಅಂತಿಮ ಹಂತದ ಆಂದೋಲನ ನವೆಂಬರ್ 23ರಂದು ನಡೆಯಲಿದೆ.