ಕೊಡಗು, ಫೆ.27 (DaijiworldNews/MB) : ಮಡಿಕೇರಿಯಲ್ಲಿ ಸೋಮವಾರ ಮದುವೆಯಾಗಲಿರುವ ದಂಪತಿಗೆ ಕೊರೊನಾ ನಿಯಮಗಳೇ ತೊಂದರೆ ಉಂಟು ಮಾಡಿದೆ. ಈ ಜೋಡಿಯು ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದು ವಧು ಮಡಿಕೇರಿ ನಿವಾಸಿಯಾಗಿದ್ದರೆ, ವರ ಕೇರಳದ ನಿವಾಸಿ. ಕೊರೊನಾ ಕಾರಣದಿಂದಾಗಿ ಕರ್ನಾಟಕ ಸರ್ಕಾರ ಕೇರಳ ಹಾಗೂ ಮಹಾರಾಷ್ಟ್ರದಿಂದ ಬರುವವರಿಗೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯ ಮಾಡಿದೆ. ಈ ಹಿನ್ನೆಲೆಯಲ್ಲಿ ಈ ಜೋಡಿಯ ವಿವಾಹ ನಡೆಸುವುದಾದರೂ ಹೇಗೆ ಎಂಬುದು ಕುಟುಂಬದ ಆತಂಕಕ್ಕೆ ಕಾರಣವಾಗಿದೆ.
ಸರ್ಕಾರವು ಈಗಾಗಲೇ 72 ಗಂಟೆಗಳ ಮೊದಲು ಮಾಡಿಸಿದ ಕೊರೊನಾ ನೆಗೆಟಿವ್ ವರದಿಯನ್ನು ಗಡಿಯಲ್ಲಿ ತೋರಿಸಿದರೆ ಮಾತ್ರ ಗಡಿಯೊಳಗೆ ಪ್ರವೇಶವೆಂದು ಹೇಳಿದೆ. ಆದರೆ ಸರ್ಕಾರಿ ಪ್ರಯೋಗಾಲಯಗಳನ್ನು ಭಾನುವಾರ ಮುಚ್ಚಿರುತ್ತದೆ. ಖಾಸಗಿ ಪ್ರಯೋಗಾಲಯಗಳು ಪ್ರತಿ ಕೊರೊನಾ ಪರೀಕ್ಷೆಗೆ 2,500 ರೂ. ಪಡೆಯುತ್ತದೆ. 15 ಜನರು ಮದುವೆಗೆ ಹೋಗಬೇಕಾದರೆ 35,000 ರೂ. ಯನ್ನು ವರನ ಕಡೆಯವರು ಖರ್ಚು ಮಾಡಲು ಈ ಸಂಕಷ್ಟದ ಸಂದರ್ಭದಲ್ಲಿ ಅಸಾಧ್ಯವಾಗಿದೆ. ಏತನ್ಮಧ್ಯೆ ಕೊರೊನಾ ನೆಗೆಟಿವ್ ವರದಿಯಿಲ್ಲದೆ ಗಡಿ ದಾಟಿ ಬರಲು ಅನುಮತಿ ನೀಡುವಂತೆ ವಧುವಿನ ಕಡೆಯವರು ಜಿಲ್ಲಾಡಳಿತವನ್ನು ಕೋರಿದೆ.
ಕೊರೊನಾ ತನ್ನ ಕಬಂಧ ಬಾಹುವನ್ನು ವಿಶ್ವದೆಲ್ಲೆಡೆ ಹರಡಿ ಒಂದು ವರ್ಷ ಕಳೆದರೂ ಕೂಡಾ ಈಗಲೂ ಜನರು ಮದುವೆ, ಮೊದಲಾದ ಸಮಾರಂಭ ನಡೆಸಲು ಕಷ್ಟಪಡುವಂತಾಗಿದೆ.