ಮುಂಬೈ, ಫೆ.27 (DaijiworldNews/MB) : ಉದ್ಯಮಿ ಮುಖೇಶ್ ಅಂಬಾನಿ ಮನೆ ಹತ್ತಿರ ಸ್ಫೋಟಕ ತುಂಬಿದ ಕಾರು ಪತ್ತೆಯಾದ ಸ್ಥಳದಲ್ಲಿಯೇ ಮತ್ತೊಂದು ಕಾರನ್ನು ಪೊಲೀಸರು ನೋಡಿರುವುದಾಗಿ ಅಧಿಕಾರಿಯೊಬ್ಬರು ಶನಿವಾರ ಹೇಳಿದ್ದಾರೆ.
ಉದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸ ಅಂಟಲಿಯಾ ಬಳಿ ಗುರುವಾರ ಪತ್ತೆಯಾದ ಸ್ಪೋಟಕ ತುಂಬಿದ್ದ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸದಂತೆ ಅಪರಿಚಿತ ವ್ಯಕ್ತಿಗಳ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ. ಆದರೆ ಆ ಸ್ಥಳದಲ್ಲೇ ಮತ್ತೊಂದು ಕಾರನ್ನು ಪೊಲೀಸರು ನೋಡಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದು ಈ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಇಲ್ಲಿಯವರೆಗೂ ಮುಂಬೈ ಅಪರಾಧ ವಿಭಾಗದ ಪೊಲೀಸರು 25 ಜನರ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಅಂಬಾನಿ ಮನೆ ಬಳಿ ನಿಂತಿದ್ದ ಸ್ಪೋಟಕ ತುಂಬಿದ ಕಾರಿನಿಂದ ಇಳಿದ ಚಾಲಕ, ಇನ್ನೋವಾ ಕಾರಿನಲ್ಲಿ ತೆರಳುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಆ ಚಾಲಕನಿಗಾಗಿ ಪೊಲೀಸರ ತಂಡ ತೀವ್ರ ಪ್ರಯತ್ನ ನಡೆಸುತ್ತಿದೆ. ಆ ಮಾರ್ಗದಲ್ಲಿನ ನೂರಾರು ಸಿಸಿಟಿವಿ ದೃಶ್ಯಾವಳಿಗಳನ್ನು ವಿಚಾರಣಾ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಆದರೆ ಈವರೆಗೂ ಯಾವುದೇ ಸಾಕ್ಷಿ ಲಭಿಸಿಲ್ಲ ಎಂದು ಪೊಲೀಸರು ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.