ನವದೆಹಲಿ, ಫೆ.27 (DaijiworldNews/MB) : ಒಂದು ಡೋಸ್ ಕೊರೊನಾ ಲಸಿಕೆಯ ಬೆಲೆಯನ್ನು ಕೇಂದ್ರ ಸರ್ಕಾರವು 250 ರೂಪಾಯಿ ಎಂದು ನಿಗದಿಪಡಿಸಿದ್ದು ಇದು ಖಾಸಗಿ ಆಸ್ಪತ್ರೆಗಳಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಅನಾರೋಗ್ಯ ಪೀಡಿತ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾರ್ಚ್ 1 ರಿಂದ ನೀಡಲಾಗುತ್ತದೆ ಎಂದು ವರದಿಯಾಗಿದೆ.
ಆದಾಗ್ಯೂ, ಮುಂದಿನ ಸೂಚನೆ ಬರುವವರೆಗೂ ಬೆಲೆಗಳು ಬದಲಾಗುವ ಸಾಧ್ಯತೆ ಇದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಜನರಿಗೆ ಉಚಿತವಾಗಿ ಲಸಿಕೆ ನೀಡಲು ಎಂದು ಸರ್ಕಾರ ನಿರ್ಧರಿಸಿದೆ.
ಒಂದು ಡೋಸ್ಗೆ 150 ರೂ. ಹಾಗೂ ಸೇವಾ ಶುಲ್ಕವಾಗಿ 100 ರೂ.ಯಂತೆ ಖಾಸಗಿ ಆಸ್ಪತ್ರೆಗಳು ಕೊರೊನಾ ಲಸಿಕೆ ಪಡೆಯುವವರಿಗೆ ವಿಧಿಸಬಹುದಾಗಿದೆ.
ಈ ನಿರ್ಧಾರವನ್ನು ರಾಷ್ಟ್ರೀಯ ಆರೋಗ್ಯ ಮಿಷನ್ ತೆಗೆದುಕೊಂಡಿದ್ದು, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರವಾನಿಸಲಾಗುತ್ತಿದೆ ಎಂದು ವರದಿಯಾಗಿದೆ.
ಆರೋಗ್ಯ ಮತ್ತು ಕೊರೊನಾ ಕಾರ್ಯದಲ್ಲಿ ಮುಂಚೂಣಿಯಾಗಿರುವವರಿಗೆ ಕೊರೊನಾ ಲಸಿಕೆ ನೀಡಿದ ಬಳಿಕ ಮೂರನೇ ಹಂತದ ಕೊರೊನಾ ಲಸಿಕೆಯನ್ನು ಮಾರ್ಚ್ ಆರಂಭದಿಂದ 10,000 ಸರ್ಕಾರಿ ಮತ್ತು 20,000 ಕ್ಕೂ ಹೆಚ್ಚು ಖಾಸಗಿ ಕೊರೊನಾ ಲಸಿಕಾ ಕೇಂದ್ರಗಳಲ್ಲಿ 27 ಕೋಟಿ ಜನರಿಗೆ ನೀಡಲಾಗುತ್ತದೆ.
ಈ ಲಸಿಕೆಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡಲಾಗಿದ್ದು, ಖಾಸಗಿ ಕೊರೊನಾ ಲಸಿಕಾ ಕೇಂದ್ರಗಳು ಸರ್ಕಾರಿ ಆಸ್ಪತ್ರೆಗಳಿಂದ ಲಸಿಕೆಯನ್ನು ಪಡೆಯಬೇಕಾಗಿದೆ.