ಹಾಸನ, ಫೆ.27 (DaijiworldNews/PY): ಅರಸೀಕೆರೆ ಪ್ರದೇಶದಲ್ಲಿ 4-5 ಕಸಾಯಿಖಾನೆಗಳು ಅನಧಿಕೃತವಾಗಿ ನಡೆಯುತ್ತಿರುವುದರ ವಿರುದ್ದ ಕ್ರಮ ತೆಗೆದುಕೊಳ್ಳಲು ಪೊಲೀಸ್ ವರಿಷ್ಠಾಧಿಕಾರಿಗೆ ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಸೂಚಿಸಿದ್ದಾರೆ.
ಅನಧಿಕೃತ ಕಸಾಯಿಖಾನೆಯ ವಿರುದ್ದ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಪ್ರಭು ಚೌವ್ಹಾಣ್ ಅವರು, "ಕಸಾಯಿಖಾನೆಯ ಬಗ್ಗೆ ಕೆಲ ದಿನಗಳ ಹಿಂದೆ ಆರೋಪ ಕೇಳಿ ಬಂದಿದ್ದು, ಈ ನಿಟ್ಟಿನಲ್ಲಿ ಇದರ ವಿರುದ್ದ ಕ್ರಮ ಕೈಗೊಳ್ಳಲು ಪೊಲೀಸ್ ವರಿಷ್ಠಾಧಿಖಾರಿಗಳಿಗೆ ಸೂಚಿಸಿದ್ದೇನೆ" ಎಂದಿದ್ದಾರೆ.
ಕೆಲ ದಿನಗಳ ಹಿಂದೆ ಸಚಿವರು ಹಾಸನ ಜಿಲ್ಎಗೆ ಭೇಟಿ ನೀಡಿದ್ದ ವೇಳೆ ಈ ವಿಚಾರವನ್ನು ಗೋಪಾಲಕರು ಸಚಿವರಿಗೆ ತಿಳಿಸಿದ್ದಾರೆ. ಈಗ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, "ಅರಸೀಕೆರೆ ನಗರ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಸಂಗ್ರಹಿಸಿದ ಸುಮಾರು 1 ಟನ್ ಗೋಮಾಂಸವನ್ನು ಪೊಲೀಸ್ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವ ವಿಚಾರ ಹಾಗೂ ಅನಧಿಕೃತವಾಗಿ ಮೂಳೆ ಸಂಗ್ರಹ ಮಾಡುವ ವಿಚಾರವೂ ಕೂಡಾ ನನ್ನ ಗಮನಕ್ಕೆ ಬಂದಿದೆ. ತಪ್ಪಿತಸ್ಥರ ವಿರುದ್ದ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ" ಎಂದು ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯು ಗೌಗ್ಯಾನ ಫೌಂಡೇಶನ್ ಸ್ವಯಂ ಸೇವಕರ ಸಹಾಯದಿಂದ ಕಾರ್ಯಾಚರಣೆ ನಡೆಸಿದ್ದು, ಗೋಮಾಂಸ ಸೇರಿದಂತೆ ಮೂಳೆಗಳನ್ನು ವಶಪಡಿಸಿಕೊಂಡಿದ್ದರು.