ಗದಗ, ಫೆ.27 (DaijiworldNews/PY): "ಟ್ರ್ಯಾಕ್ಟರ್ ರ್ಯಾಲಿ ನಡೆಸಿ ಮನವಿ ನೀಡುವ ವೇಳೆ ಶಾಸಕ ಎಚ್.ಕೆ.ಪಾಟೀಲ ಅವರು ನಡೆದುಕೊಂಡ ರೀತಿ ಸರಿಯಿಲ್ಲ. ಇದನ್ನು ನಾನು ಖಂಡಿಸುತ್ತೇನೆ" ಎಂದು ಗದಗ ಜಿಲ್ಲಾ ಉಸ್ತುವಾರಿ ಸಿ.ಸಿ.ಪಾಟೀಲ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಟ್ರ್ಯಾಕ್ಟರ್ ರ್ಯಾಲಿ ನಡೆಸಿ ಮನವಿ ನೀಡಲು ಡಿಸಿ ಕಚೇರಿಗೆ ಹೋಗಿದ್ದರು. ಅಲ್ಲಿ ಅವರು ಸಭೆ ನಡೆಸಿದ್ದು,, ಇದನ್ನು ನನಗೆ ಕೆಲವರು ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿದ್ದಾರೆ. ರಾಜ್ಯದ ಹಿರಿಯ ರಾಜಕಾರಣಿ ನಡೆದುಕೊಂಡ ರೀತಿ ಸರಿಯಿಲ್ಲ.ಇದು ಖಂಡನೀಯ" ಎಂದು ಕಿಡಿಕಾರಿದರು.
"ಯಾರೇ ಆದರು ಪ್ರತಿಭಟನಾ ರ್ಯಾಲಿ ನಡೆಸಿ ಬಳಿಕ ಮನವಿ ನೀಡಲು ಜಿಲ್ಲಾಧಿಕಾರಿ ಕಚೇರಿಯ ಮುಖ್ಯದ್ವಾರದ ಮುಂದೆ ನಿಲ್ಲುತ್ತಿದ್ದರು. ಡಿಸಿ ಮನವಿ ಸ್ವೀಕರಿಸುತ್ತಿದ್ದರು. ಆ ವಿಚಾರ ಅಲ್ಲಿಗೆ ಮುಗಿಯುತ್ತಿತ್ತು. ಆದರೆ, ಶಾಕರು ಒಳಕ್ಕೆ ಟ್ರ್ಯಾಕ್ಟರ್ ಅನ್ನು ಚಲಾಯಿಸಿಕೊಂಡು ಹೋಗಿದ್ದು, ದೆಹಲಿಯಲ್ಲಿ ರೈತರು ಮಾಡಿದಂತೆ ಮಾಡಿದ್ದಾರೆ. ಇನ್ನೊಮ್ಮೆ ಕಾನೂನು ಉಲ್ಲಂಘನೆ ಮಾಡಿದ್ದಲ್ಲಿ ತನ್ನ ಅಧಿಕಾರ ಬಳಸಬೇಕು. ಅವರು ಹಿರಿಯ ರಾಜಕಾರಣಿ ಆಗಿರುವ ಕಾರಣ ಈ ಸಲ ಸೌಜನ್ಯದಿಂದ ವರ್ತಿಸುವೆ. ಮುಂದೆ ಇದೇ ರೀತಿ ಮಾಡಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದರು.
"ಪ್ರತಿಭಟನೆಯ ವೇಳೆ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬಂದಿದ್ದಾರೆ ಎಂದು ಕೇಳಿದೆ. ಆದರೆ, ಟ್ರ್ಯಾಕ್ಟರ್ ಓಡಿಸಲು ಅವರೊಂದಿಗೆ ಪರವಾನಗಿ ಇತ್ತೇ, ತಿಳಿದಿಲ್ಲ. ಡಿಎಲ್ ಇಲ್ಲ ಎಂದಾದರೆ ಅಂತಹ ಹಿರಿಯ ರಾಜಕಾರಣಿಗೆ ಶೋಭೆಯಲ್ಲ" ಎಂದು ತಿಳಿಸಿದರು.