ತೂತುಕುಡಿ, ಫೆ.27 (DaijiworldNews/MB) : ''ನಮ್ಮ ದೇಶದಲ್ಲಿ ಕೆಲವು ಪ್ರದೇಶಗಳನ್ನು ಚೀನೀಯರು ಆಕ್ರಮಣ ಮಾಡಿದ್ದಾರೆ. ಮೊದಲು ದೋಖ್ಲಾಮ್ನಲ್ಲಿ ನಮ್ಮ ಪ್ರದೇಶವನ್ನು ಆಕ್ರಮಿಸಿ ಪರೀಕ್ಷೆ ನಡೆಸಿದ ಚೀನೀಯರು ಭಾರತ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ತಿಳಿದ ಬಳಿಕ ಲಡಾಖ್ನಲ್ಲಿಯೂ ಅತಿಕ್ರಮಣ ಮಾಡಲು ಮುಂದಾದರು. ಪ್ರಧಾನಿ ಮೋದಿ ಮಾತ್ರ ಭಾರತದ ಭೂಮಿಯನ್ನು ಯಾರೂ ಆಕ್ರಮಿಸಿಲ್ಲ ಎಂದು ಹೇಳಿದರು. ಇದರಿಂದಾಗಿ ಪ್ರಧಾನಿ ಮೋದಿ ಭಯಗ್ರಸ್ಥರು ಎಂದು ಚೀನಾಕ್ಕೆ ತಿಳಿದಿದೆ'' ಎಂದು ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ಹೇಳಿದರು.
ಏಪ್ರಿಲ್ 6ರ ವಿಧಾನಸಭಾ ಚುನಾವಣೆಗೆ ಮುನ್ನ ತಮ್ಮ ಮೂರು ದಿನಗಳ ತಮಿಳುನಾಡು ಪ್ರವಾಸವನ್ನು ಪ್ರಾರಂಭಿಸಿದ ರಾಹುಲ್ ಗಾಂಧಿ ಶನಿವಾರ ಮಾತನಾಡಿದ್ದು, ''ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಚೀನೀಯರಿಗೆ ಪ್ರಧಾನಿ ಮೋದಿ ಭಯಬೀತರಾಗಿದ್ದಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ, ಇದು ಭಾರತದ ಭವಿಷ್ಯಕ್ಕೆ ಅಪಾಯವನ್ನು ತಂದೊಡ್ಡಿದೆ'' ಎಂದು ಹೇಳಿದರು.
ಹಾಗೆಯೇ, ''ಕಾಂಗ್ರೆಸ್ ಸರ್ಕಾರವಿದ್ದಾಗ ನಾವು ಯಾವುದೇ ಹಿಂಜರಿಕೆ ಇಲ್ಲದೇ ಚೀನಿಯರೊಂದಿಗೆ ನೇರವಾಗಿ ವ್ಯವಹಾರ ಮಾಡುತ್ತಿದ್ದೆವು. ಇದರಿಂದಾಗಿ ಭಾರತವನ್ನು ಆಕ್ರಮಿಸಲು ಸಾಧ್ಯವಿಲ್ಲವೆಂದು ಅವರಿಗೆ ತಿಳಿದಿತ್ತು. 2013ರಲ್ಲಿ ಚೀನಿಯರು ಭಾರತಕ್ಕೆ ಪ್ರವೇಶಿಸಿದಾಗಲೂ ನಾವು ಅಗತ್ಯ ಕ್ರಮ ಕೈಗೊಂಡಿದ್ದೇವೆ. ಅವರಿಗೆ ಒತ್ತಡ ಹೇರಿದ್ದೇವೆ. ನಾವು ಕೂಡಾ ಅವರ ಸ್ಥಳವನ್ನು ಆಕ್ರಮಿಸಿದ್ದೇವೆ'' ಎಂದರು.