ನವದೆಹಲಿ, ಫೆ.27 (DaijiworldNews/MB) : ''ಕೇರಳ, ಅಸ್ಸಾಂಗೆ ಹೋಗುವ ಪ್ರಧಾನಿಗೆ 20ಕಿ.ಮೀ ತೆರಳಿ ರೈತರನ್ನು ಭೇಟಿಯಾಗಲು ಆಗಲ್ಲ'' ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ದೂರಿದ್ದಾರೆ.
ಕಳೆದ ನವೆಂಬರ್ 26 ರಿಂದ ರೈತರು ದೆಹಲಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಈವರೆಗೂ ಪ್ರಧಾನಿ ನರೇಂದ್ರ ಮೋದಿಯವರು ರೈತರನ್ನು ಭೇಟಿಯಾಗಿಲ್ಲ. ಈ ವಿಚಾರವಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರು ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಬಗ್ಗೆ ಟ್ವೀಟ್ ಮಾಡುವ ಅವರು, ''ಆರ್ಥಿಕ ಹಿಂಜರಿತ ವರ್ಷದಲ್ಲಿ 3.9% ರಷ್ಟು ಬೆಳೆದಿದ್ದಕ್ಕಾಗಿ ಕೃಷಿ ಕ್ಷೇತ್ರಕ್ಕೆ ದೊರಕುವ ಪ್ರತಿಫಲವೆಂದರೆ ಪ್ರತಿಭಟನಾ ನಿರತ ರೈತರನ್ನು ರಾಜ್ಯದ ಶತ್ರುಗಳಂತೆ ನೋಡಿಕೊಳ್ಳುವುದು. ಪ್ರಧಾನಿ ಕೇರಳದಿಂದ ಅಸ್ಸಾಂಗೆ ಪ್ರಯಾಣಿಸುತ್ತಾರೆ ಆದರೆ ದೆಹಲಿಯ ಗಡಿಯಲ್ಲಿರುವ ರೈತರನ್ನು ಭೇಟಿ ಮಾಡಲು 20 ಕಿ.ಮೀ ಪ್ರಯಾಣಿಸಲು ಸಮಯ ಅಥವಾ ಒಲವು ಅವರಿಗಿಲ್ಲ'' ಎಂದು ಟೀಕಿಸಿದ್ದಾರೆ.
''ಆದರೂ ಅವರು ರೈತರ ಆದಾಯವನ್ನು ದ್ವಿಗುಣಗೊಳಿಸಿದ್ದಾರೆ ಎಂದು ಹೇಳಿಕೊಳ್ಳುತ್ತಾರೆ. ಸತ್ಯವೆಂದರೆ ಕೇವಲ 6 ಶೇಕಡಾ ರೈತರು ಮಾತ್ರ ಕನಿಷ್ಠ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಸಮರ್ಥರಾದಾಗ ಎಲ್ಲಾ ರೈತರು ಎಂಎಸ್ಪಿ ಪಡೆಯುತ್ತಾರೆ ಎಂದು ಅವರು ಹೇಳಿಕೊಳ್ಳುತ್ತಾರೆ'' ಎಂದು ಇನ್ನೊಂದು ಟ್ವೀಟ್ನಲ್ಲಿ ಹೇಳಿದ್ದಾರೆ.