ಕಾರವಾರ, ಫೆ.27 (DaijiworldNews/HR): ಯಲ್ಲಾಪುರ ತಾಲೂಕಿನ ನಂದೊಳ್ಳಿಯ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಹೋಮ್ ವರ್ಕ್ನಿಂದ ಹಾಗೂ ತಾಯಿಯ ಬೈಗುಳದಿಂದ ತಪ್ಪಿಸಿಕೊಳ್ಳಲು ತನ್ನನ್ನು ಯಾರೋ ಅಪಹರಿಸಿದ್ದರು ಎಂದು ನಾಟಕವಾಡಿರುವ ಘಟನೆ ಇದೀಗ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಬುಧವಾರ ಸಂಜೆ ಶಾಲೆಯಿಂದ ಮಾಗೋಡ ಬಸ್ನಲ್ಲಿ ಮನೆಗೆ ಹೊರಟಿದ್ದು, ನಂದೊಳ್ಳಿಯಲ್ಲಿ ಇಳಿದಿದ್ದಳು. ಆದರೆ ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಯಾರೋ ಅಪಹರಿಸಿರಬಹುದೆಂದು ಯಲ್ಲಾಪುರ ಠಾಣೆಯಲ್ಲಿ ಕುಟುಂಬಸ್ಥರು ದೂರು ನೀಡಿದ್ದರು.
ಇನ್ನು ಸಂಜೆಯಿಂದ ರಾತ್ರಿಯವರೆಗೆ ಆಕೆಯನ್ನು ಹುಡುಕಿದರೂ ಪತ್ತೆಯಾಗಿರಲಿಲ್ಲ ಬಳಿಕ ಮಧ್ಯರಾತ್ರಿ ಮನೆಯ ಸಮೀಪದ ಕಾಡಿನಲ್ಲಿ ಪತ್ತೆಯಾಗಿದ್ದಾಳೆ. ಯಾವುದೇ ಸಮಸ್ಯೆಗಳಿಲ್ಲದೇ ಸುರಕ್ಷಿತವಾಗಿದ್ದಳು ಎನ್ನಲಾಗಿದೆ.
ಬೈಕ್ ಮೇಲೆ ಬಂದ ಮೂವರು ವಿಳಾಸ ಕೇಳುವ ನೆಪದಲ್ಲಿ ಮಾತನಾಡಿಸಿ ಅಪಹರಿಸಿದ್ದರು. ರಾತ್ರಿ ವೇಳೆ ಕೈಕಾಲು ಕಟ್ಟಿ ಮನೆಯ ಬಳಿಯ ಕಾಡಿನಲ್ಲಿ ಬಿಟ್ಟು ಹೋಗಿರುವುದಾಗಿ ಆಕೆ ಪೊಲೀಸರಿಗೆ ತಿಳಿಸಿದ್ದಳು.
ವಿದ್ಯಾರ್ಥಿನಿಯನ್ನು ಕಟ್ಟಿ ಹಾಕಿದ್ದ ಸ್ಥಳವನ್ನು ಡಿವೈಎಸ್ಪಿ ರವಿ ನಾಯ್ಕ, ಪಿಐ ಸುರೇಶ ಯಳ್ಳೂರ ಹಾಗೂ ಪಿಎಸ್ಐ ಮಂಜುನಾಥ ಗೌಡರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ವೇಳೆ ಪೊಲೀಸರು ವಿದ್ಯಾರ್ಥಿನಿಯ ಮನೆಗೂ ಭೇಟಿ ನೀಡಿ ಕುಟುಂಬದವರೊಂದಿಗೆ ಚರ್ಚಿಸಿದ್ದರು. ಬಳಿಕ ವಿದ್ಯಾರ್ಥಿನಿಯನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಶಾಲಾ ಚಟುವಟಿಕೆಗಳನ್ನು ಸರಿಯಾಗಿ ಮಾಡದ ಕಾರಣ ತಾಯಿಯು ಶಾಲಾ ಶಿಕ್ಷಕರಲ್ಲಿ ವಿಚಾರಿಸಿದ್ದರು. ಈ ವೇಳೆ ಶಾಲಾ ಚಟುವಟಿಕೆಗಳನ್ನು ಸಮರ್ಪಕವಾಗಿ ಮಾಡಿಲ್ಲವೆಂದು ಶಿಕ್ಷಕರು ತಾಯಿಗೆ ತಿಳಿಸಿದ್ದರು. ಹೀಗಾಗಿ ಮನೆಗೆ ಹೋದಮೇಲೆ ತಾಯಿ ಬೈಯ್ಯಬಹುದು ಅಥವಾ ಹೊಡೆಯಬಹುದೆಂದು ಊಹಿಸಿಕೊಂಡು ಶಾಲೆಯಿಂದ ವಾಪಸ್ಸಾಗಿ ಮನೆಗೆ ತೆರಳದೆ ಹತ್ತಿರದ ಕಾಡು ಪ್ರದೇಶದಲ್ಲಿ ಕುಳಿತಿದ್ದೆ ಎಂದು ಹೇಳಿದ್ದಾಳೆ.