ನವದೆಹಲಿ, ಫೆ.27 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ದೆಹಲಿಯಲ್ಲಿ ವರ್ಚುವಲ್ ಕಾನ್ಫರೆನಸ್ ಮೂಲಕ ಆಟಿಕೆ ಮೇಳವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, "ಪರಿಸರ ಸ್ನೇಹಿ ವಸ್ತುಗಳ ಬಳಕೆಯನ್ನು ಹೆಚ್ಚಿಸಿ, ಹೊಸತನಕ್ಕೆ ಒತ್ತು ನೀಡಿ" ಎಂದು ರಾಷ್ಟ್ರೀಯ ಕಂಪೆನಿಗಳಿಗೆ ಮನವಿ ಮಾಡಿದರು.
"100 ಶತಕೋಟಿ ಅಮೇರಿಕನ್ ಡಾಲರ್ ಜಾಗತಿಕ ಆಟಿಕೆ ಮಾರುಕಟ್ಟೆಯಲ್ಲಿ ಭಾರತದ ಪಾಲು ಕಡಿಮೆ. ಭಾರತದ ಮಾರುಕಟ್ಟೆಯಲ್ಲಿ ಚೀನಾದ ಆಟಿಕೆಗಳ ಪ್ರಾಬಲ್ಯಕ್ಕೆ ಸವಾಲೊಡ್ಡುವ ನಿಟ್ಟಿನಲ್ಲಿ ದೇಶದ ಆಟಿಕೆ ಉದ್ಯಮವನ್ನ ಕೇಂದ್ರ ಸರ್ಕಾರ ಉತ್ತೇಜಿಸಲು ಮುಂದಾಗಿದೆ" ಎಂದರು.
"ದೇಶದಲ್ಲಿ ಮಾರಾಟವಾಗುವ ಆಟಿಕೆಗಳ ಪೈಕಿ ಶೇ.85ರಷ್ಟು ಆಮದು ಮಾಡಿಕೊಳ್ಳುತ್ತೇವೆ. ಈ ನಿಟ್ಟಿನಲ್ಲಿ ಇನ್ನು ಮುಂದೆ ಮೇಡ್ ಇನ್ ಇಂಡಿಯಾ ಆಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು" ಎಂದು ತಿಳಿಸಿದರು.
"ಚನ್ನಪಟ್ಟಣದ ಆಟಿಕೆ ಕ್ಲಸ್ಟರ್ ನಮ್ಮ ದೇಶಕ್ಕೆ ಮಾತ್ರವೇ ಸೀಮಿತವಾಗಬಾರದು. ಬದಲಾಗಿ, ಇದನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದು ವಿಶ್ವದ ಎಲ್ಲಾ ಮಕ್ಕಳ ಮುಖದಲ್ಲಿ ನಗು ತರುವಂತೆ ಮಾಡಬೇಕು" ಎಂದರು.
"ಚನ್ನಪಟ್ಟಣದ ಗೊಂಬೆಗಳನ್ನು ವಿಶ್ವಮಟ್ಟದಲ್ಲಿ ಪ್ರಸಿದ್ದಿಗೊಳಿಸಲು ಎಲ್ಲರೂ ಜೊತೆಯಾಗಿ ಕಾರ್ಯ ನಿರ್ವಹಿಸಬೇಕು. ಸರ್ಕಾರ ಇದಕ್ಕೆ ಬೇಕಾದ ಅಗತ್ಯವಾದ ಸಹಕಾರವನ್ನು ನೀಡುತ್ತದೆ. ಕರ್ನಾಟಕ ಸರ್ಕಾರವು, ಬೆಂಗಳೂರಿನಲ್ಲಿ ಐಟಿ ವೃತ್ತಿಪರರ ಮುಖೇನ ಚನ್ನಪಟ್ಟಣದ ಬೊಂಬೆ ತಯಾರಿಕರಿಗೆ ಕಾರ್ಯಾಗಾರವನ್ನು ಏರ್ಪಡಿಸಲು ವ್ಯವಸ್ಥೆ ಮಾಡಲಿದೆ" ಎಂದು ತಿಳಿಸಿದರು.