ನವದೆಹಲಿ, ಫೆ.27 (DaijiworldNews/HR): "ನಮ್ಮ ದೇಶದ ಜನ ಆರ್ಥಿಕ ಬೆಳವಣಿಗೆ ಕುಂಠಿತ ಹಾಗೂ ಹಣದುಬ್ಬರ ಏರಿಕೆಯ ಎರಡೆರಡು ಹೊಡೆತಕ್ಕೆ ಸಿಲುಕಿದ್ದು, ಆರ್ಥಿಕ ಸ್ಥಿತಿಯು ಈ ಮಟ್ಟಕ್ಕೆ ತಲುಪಲು ಮೋದಿ ಸರ್ಕಾರದ ತಪ್ಪು ನಿರ್ವಹಣೆಯೇ ಮೂಲ ಕಾರಣ" ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ ಎನ್ನಲಾಗಿದೆ.
ಈ ಕುರಿತು ಮಾತನಾಡಿದ ಕಾಂಗ್ರೆಸ್ನ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲ, "ಮೂರನೇ ತ್ರೈಮಾಸಿಕದ ಜಿಡಿಪಿ ದತ್ತಾಂಶವು ಭಾರತೀಯ ಆರ್ಥಿಕತೆಯಲ್ಲಿ ದೋಷದ ಅಂಶಗಳು ಹಿಂದೆಂದಿಗಿಂತಲೂ ಹೆಚ್ಚು ಗೋಚರಿಸುತ್ತವೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ" ಎಂದರು.
ಇನ್ನು "ಪ್ರಧಾನಿ ಮೋದಿ ಮೊದಲ ತ್ರೈಮಾಸಿಕದ ಜಿಡಿಪಿ ಶೇ. 23.9 ಇರಲಿದೆ ಎಂದು ಈ ಹಿಂದೆ ಅಂದಾಜಿಸಿದ್ದರೆ ಈಗ ಪರಿಷ್ಕರಣೆಗೊಳಿಸಿ ಶೇ. 24.4 ಎಂದಿರುವುದೂ ಗಮನಾರ್ಹವಾಗಿದೆ. ಇನ್ನು ಸರಿಯಾದ ಯೋಜನೆಯಿಲ್ಲದ ಮತ್ತು ಸಮರ್ಪಕವಲ್ಲದ ಲಾಕ್ಡೌನ್ನಿಂದಾಗಿ ಆರ್ಥಿಕತೆಯು ಹೊಡೆತ ಅನುಭವಿಸುವಂತಾಗಿದೆ. ಇದು ಈಗಾಗಲೇ ಜಿಎಸ್ಟಿ ಅಸಮರ್ಪಕ ಅನುಷ್ಠಾನ, ನೋಟು ರದ್ದತಿಯಿಂದ ಆದ ಏಟಿಗೆ ಬರೆ ಎಳೆದಂತಾಗಿದೆ ಎಂದು ಹೇಳಿದ್ದಾರೆ.