ಮೈಸೂರು, ಫೆ.27 (DaijiworldNews/HR): "ಪಕ್ಷಕ್ಕಾಗಿ ದುಡಿಯುವರಾರು ಯಾರೋ? ಸ್ವಾರ್ಥಕ್ಕೆ ಮಾಡಿಕೊಳ್ಳೋದು ಇನ್ಯಾರೋ? ತಮ್ಮ ಮನೆ ಬೆಳೆಸಿಕೊಳ್ಳೋದೇ ಆಯ್ತು. ತಮ್ಮ ಅವಧಿ ಮುಗಿಯಿತು ಎಂದು ತಪ್ಪು ಮಾಡಬಾರದು" ಎಂದು ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರನ್ನು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುವುದಲ್ಲ. ನಮಗೆ ತೃಪ್ತಿ ಇರಬಹುದು. ಆದರೆ ಜನರಲ್ಲಿ ಅತೃಪ್ತಿ ಇದ್ದು, ಅವರಲ್ಲಿ ಹತಾಶೆ, ನಿರಾಸೆ ಮೂಡಿದೆ. ಇದು ನನ್ನ ಅನುಭವಕ್ಕೂ ಬರುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದು, ಇದು ಜನರಲ್ಲಿ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಲು ಕಾರಣವಾಗುತ್ತಿದೆ ಎಂಬ ವಿವೇಚನೆ ನಮ್ಮ ರಾಜ್ಯದ ಯಾವೊಬ್ಬ ನಾಯಕರಿಗೂ ಇಲ್ಲವಾಗಿದ್ದು, ಪಕ್ಷದ ಹಿತಕ್ಕಿಂತ ಸ್ವಾರ್ಥವೇ ಮುಖ್ಯವಾಗಿದೆ" ಎಂದರು.
ಇನ್ನು "ಚುನಾವಣೆಗೆ ಕೆಲವು ಸಮಯವಿದೆ ಎಂದುಕೊಂಡು ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳದೇ ಕಣ್ಮುಚ್ಚಿ ಕುಳಿತಿದ್ದರೆ, ಜನರೇ ತಕ್ಕ ಪಾಠ ಕಲಿಸಲಿದ್ದಾರೆ" ಎಂದು ಎಚ್ಚರಿಸಿದ್ದಾರೆ.