ನವದೆಹಲಿ, ಫೆ.27 (DaijiworldNews/PY): ನಾಗರಿಕ ವಿಮಾನಯಾನ ನಿರ್ದೇಶನಾಲಯ ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನ ಸಂಚಾರ ನಿಷೇಧವನ್ನು ಮಾರ್ಚ್ 31ರವರೆಗೆ ವಿಸ್ತರಣೆ ಮಾಡಿದೆ.
ಸಾಂದರ್ಭಿಕ ಚಿತ್ರ
"ಕೊರೊನಾ ಕಾರಣದಿಂದ ಕಳೆದ ಮಾರ್ಚ್ 23ರಿಂದ ಅಂತರಾಷ್ಟ್ರೀಯ ವಿಮಾನ ಸಂಚಾರವನ್ನು ಸ್ಥಗಿಗೊಳಿಸಲಾಗಿತ್ತು. ಡಿಜಿಸಿಎ ಇದೀಗ ಪರಿಷ್ಕೃತ ಸುತ್ತೋಲೆಯನ್ನು ಹೊರಡಿಸಿದ್ದು, ನಿಷೇಧ ವಿಸ್ತರಣೆ ಮಾಡಲಾಗಿದೆ" ಎಂದು ತಿಳಿಸಿದೆ.
"ನಿಗದಿತ ಅಂತರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಆಯ್ದ ಮಾರ್ಗಗಳಲ್ಲಿ ಅನುವು ಮಾಡಿಕೊಡಲಾಗುವುದು. ಈ ನಿಯಮ ಸರಕುಸಾಗಣೆ ವಿಮಾನಗಳು ಹಾಗೂ ವಿಶೇಷ ವಿಮಾನಗಳಿಗೆ ಅನ್ವಯಿಸುವುದಿಲ್ಲ" ಎಂದಿದೆ.
ನಿಷೇಧದ ಹೊರತಾಗಿಯೂ ಕಳೆದ ವರ್ಷ ಮೇ ತಿಂಗಳಿನಿಂದ ವಂದೇ ಭಾರತ್ ಮಿಷನ್ ಅಡಿ ವಿಶೇಷ ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಲಾಗುತ್ತಿದೆ. ಆಯ್ದೆ ದೇಶಗಳಿಗೆ ದ್ವಿಪಕ್ಷೀಯ ವೈಮಾನಿಕ ಒಪ್ಪಂದದ ಆಧಾರದಲ್ಲಿ ಜುಲೈ ತಿಂಗಳಿನಿಂದ ವಿಶೇಷ ವಿಮಾನ ಸಂಚಾರಕ್ಕೆ ಅನುಮತಿ ನೀಡಲಾಗುತ್ತಿದೆ.
ಭಾರತವು, ಫ್ರಾನ್ಸ್ ಸೇರಿದಂತೆ ಕೀನ್ಯಾ, ಬ್ರಿಟನ್, ಅಮೇರಿಕಾ, ಯುಎಇ, ಭೂತಾನ್ ಹಾಗೂ ಇಕರೆ ಕೆಲ ದೇಶಗಳೊಂದಿಗೆ ದ್ವಿಪಕ್ಷೀಯ ವೈಮಾನಿಕ ಒಪ್ಪಂದವನ್ನು ಮಾಡಿಕೊಂಡಿದ್ದು, ಈ ಒಪ್ಪಂದದ ಅಡಿ ಆಯಾ ದೇಶಗಳಲ್ಲಿ ಆಯಾ ದೇಶಗಳ ವಿಮಾನಯಾನ ಕಂಪೆನಿಗಳಿಗೆ ವಿಶೇಷ ವಿಮಾನಗಳ ಸಂಚಾರಕ್ಕೆ ಅವಕಾಶವಿದೆ.