ನವದೆಹಲಿ, ಫೆ.27 (DaijiworldNews/HR): "ಲೈಂಗಿಕ ಕಿರುಕುಳದ ಪ್ರಕರಣಗಳನ್ನು ಯಾವುದೇ ರೀತಿಯಲ್ಲೂ ಮುಚ್ಚಿಡಲು ಸಾಧ್ಯವಾಗುವುದಿಲ್ಲ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಲೈಂಗಿಕ ಕಿರುಕುಳದ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಜಿಲ್ಲಾ ನಿವೃತ್ತ ನ್ಯಾಯಾಧೀಶರೊಬ್ಬರ ವಿರುದ್ಧ ಮಧ್ಯಪ್ರದೇಶ ಹೈಕೋರ್ಟ್ ಜಾರಿಗೊಳಿಸಿರುವ ಆಂತರಿಕ ಇಲಾಖಾ ತನಿಖೆಯನ್ನು ರದ್ದುಗೊಳಿಸಲು ಕೋರಿ ಸಲ್ಲಿಸಿದ್ದ ಮನವಿಯ ವಿಚಾರಣೆ ಮಾಡಲು ಕೋರ್ಟ್ ನಿರಾಕರಿಸಿದೆ ಎಂದು ತಿಳಿದು ಬಂದಿದೆ.
ಇನ್ನು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬಡೆ, ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಮತ್ತು ವಿ. ರಾಮಸುಬ್ರಣಿಯನ್ ಅವರನ್ನೊಳಗೊಂಡ ನ್ಯಾಯಪೀಠವು, "ನಾವು ಯಾವುದೇ ರೀತಿಯ ಲೈಂಗಿಕ ಕಿರುಕುಳದಂಥ ಪ್ರಕರಣಗಳನ್ನು ಮುಚ್ಚಿಡಲು ಅನುಮತಿ ನೀಡುವುದಿಲ್ಲ" ಎಂದು ಹೇಳಿದೆ.
ಮಧ್ಯಪ್ರದೇಶದ ನಿವೃತ್ತ ನ್ಯಾಯಾಧೀಶ ಶಂಭೂ ಸಿಂಗ್ ರಘುವಂಶಿ ಅವರು ಕಿರಿಯ ಮಹಿಳಾ ನ್ಯಾಯಾಂಗ ಅಧಿಕಾರಿಯೊಬ್ಬರಿಗೆ ವ್ಯಾಟ್ಸ್ಆಯಪ್ನಲ್ಲಿ ಅನುಚಿತವಾದ ಸಂದೇಶಗಳನ್ನು ಕಳುಹಿಸಿದ್ದು,ಈ ಸಂಬಂಧ ಅಧಿಕಾರಿಯು ದೂರು ಸಲ್ಲಿಸಿದ್ದರು. ಈ ಕುರಿತು ಜಿಲ್ಲಾ ನಿವೃತ್ತ ನ್ಯಾಯಾಧೀಶರ ವಿರುದ್ಧ ಮಧ್ಯಪ್ರದೇಶ ಹೈಕೋರ್ಟ್ ಆಂತರಿಕ ಇಲಾಖಾ ತನಿಖೆಗೆ ಆದೇಶ ನೀಡಿತ್ತು. ಈ ಆದೇಶವನ್ನು ರದ್ದುಗೊಳಿಸಲು ಕೋರಿ ನಿವೃತ್ತ ನ್ಯಾಯಾಧೀಶರು ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಅಲ್ಲದೇ, ದೂರು ನೀಡಿದ್ದ ಅಧಿಕಾರಿಯು ತಮ್ಮ ಅರ್ಜಿಯನ್ನು ಹಿಂಪಡೆಯಲು ಮನವಿ ಮಾಡಿದ್ದರು.
ಬಳಿಕ ನ್ಯಾಯಾಲಯದ ವಿಚಾರಣೆಯಲ್ಲಿ ನಿವೃತ್ತ ನ್ಯಾಯಾಧೀಶರು ತಮ್ಮ ಕಿರಿಯ ಅಧಿಕಾರಿಗೆ ವಾಟ್ಸ್ ಆಯಪ್ನಲ್ಲಿ ಅನುಚಿತವಾದ ಸಂದೇಶಗಳನ್ನು ಕಳಹಿಸಿದ್ದನ್ನು ಒಪ್ಪಿಕೊಂಡಿದ್ದು, ಅಲ್ಲದೇ ತಮ್ಮದು ಕೇವಲ 'ಫ್ಲರ್ಟಿಂಗ್' ಎಂದೂ ಸಮರ್ಥನೆ ಕೂಡ ಮಾಡಿಕೊಂಡಿದ್ದರು ಎನ್ನಲಾಗಿದೆ.