ಬೆಂಗಳೂರು, ಫೆ.27 (DaijiworldNews/HR): "ತಮಿಳುನಾಡು ಸರಕಾರವು ಕಾವೇರಿ ನದಿಯ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಯೋಜನೆಯೊಂದಕ್ಕೆ ಅಡಿಗಲ್ಲು ಹಾಕಿದ್ದು ಇದು ಅಂತಾರಾಜ್ಯ ಜಲ ವಿವಾದ ಕಾಯ್ದೆಗೆ ವಿರುದ್ಧವಾಗಿದ್ದು, ಕಾವೇರಿ ವಿಚಾರದಲ್ಲಿ ಸ್ವೇಚ್ಛಾಚಾರಕ್ಕೆ ತಮಿಳುನಾಡಿಗೆ ಅವಕಾಶ ಮಾಡಿಕೊಡುವುದಿಲ್ಲ" ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ತಮಿಳುನಾಡು ಸರಕಾರ ಅಡಿಗಲ್ಲು ಹಾಕಿರುವ ಕಾವೇರಿ-ವೈಗೈ-ಗುಂಡೂರು ನದಿ ಜೋಡಣೆ ಯೋಜನೆಯು ಅಂತಾರಾಜ್ಯ ಕಾನೂನಿಗೆ ವಿರುದ್ಧವಾಗಿದ್ದು, ಅದರ ವಿರುದ್ಧ ನಾವು ಕಾನೂನು ಹೋರಾಟ ನಡೆಸುತ್ತೇವೆ. ಸ್ವಾತಂತ್ರ್ಯ ಪೂರ್ವದಿಂದಲೂ ರಾಜ್ಯದ ನೀರಾವರಿ ಯೋಜನೆಗಳಿಗೆ ತಮಿಳುನಾಡು ವಿರೋಧ ಮಾಡುತ್ತ ಬಂದಿದ್ದು, ಅಂತಿಮ ನಿರ್ಧಾರ ಆಗುವವರೆಗೆ ಹೆಚ್ಚುವರಿ ನೀರು ಬಳಕೆಗೆ ಅವಕಾಶ ನೀಡದಂತೆ ನಾವು ಒತ್ತಾಯಿಸುತ್ತೇವೆ" ಎಂದರು.
ಇನ್ನು "ಕಾವೇರಿಯ ಹೆಚ್ಚುವರಿ ನೀರು ಬಳಕೆ ಮಾಡಿಕೊಳ್ಳುವ ತಮಿಳುನಾಡು ಸರಕಾರದ ಉದ್ದೇಶಿತ ಯೋಜನೆಗೆ ಕೇಂದ್ರ ಸರಕಾರ ಆರ್ಥಿಕ ನೆರವು ನೀಡಿದೆ ಎಂಬುದು ಆಧಾರವಿಲ್ಲದ ಆರೋಪವಾಗಿದ್ದು, ಇಂತಹ ಸುಳ್ಳು ಸುದ್ದಿಗಳಿಗೆ ಯಾರು ಕೂಡ ಕಿವಿಗೊಡಬಾರದು" ಎಂದು ಹೇಳಿದ್ದಾರೆ.