ಬೆಂಗಳೂರು, ಫೆ. 26 (DaijiworldNews/SM): ಕರ್ನಾಟಕದಲ್ಲಿ ಹರಿಯುವ ಜೀವನದಿ ಕಾವೇರಿಯೊಂದಿಗೆ ವೆಲ್ಲಾರು- ವೈಗೈ ಮತ್ತು ಗುಂಡಾರು ನದಿಗಳನ್ನು ಜೋಡಿಸಿ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ತಮಿಳುನಾಡಿಗೆ ಅವಕಾಶ ನೀಡುವುದಿಲ್ಲ ಎಂದು ಕರ್ನಾಟಕ ಸರ್ಕಾರ ಶುಕ್ರವಾರ ತನ್ನ ನಿಲುವು ಸ್ಪಷ್ಟಪಡಿಸಿದೆ.
ಈ ಯೋಜನೆಯನ್ನು ಮುಂದುವರೆಸಲು ತಮಿಳುನಾಡು ಸರ್ಕಾರಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಈ ಬಗ್ಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಬಸವರಾಜ ಬೊಮ್ಮಾಯಿ, ಕಾವೇರಿಯ 45 ಟಿಎಂಸಿ ಹೆಚ್ಚುವರಿ ನೀರನ್ನು ತಮಿಳುನಾಡಿನ ಯೋಜನೆಗಳಿಗೆ ಬಳಸಿಕೊಳ್ಳಲು ಕರ್ನಾಟಕ ಅವಕಾಶ ನೀಡುವುದಿಲ್ಲ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದಿದ್ದಾರೆ.