ನವದೆಹಲಿ, ಫೆ.26 (DaijiworldNews/PY): ತಮಿಳುನಾಡು, ಅಸ್ಸಾಂ, ಕೇರಳ, ಪಶ್ಚಿಮಬಂಗಾಳ ಹಾಗೂ ಪುದುಚೇರಿ ವಿಧಾನಸಭಾ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಫೆ.26ರ ಶುಕ್ರವಾರ ಪ್ರಕಟಿಸಿದೆ.
ಸಾಂದರ್ಭಿಕ ಚಿತ್ರ
ವಿಜ್ಞಾನ್ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಆರೋರಾ, "ಅಸ್ಸಾಂನಲ್ಲಿ ಮೂರು ಹಂತದ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಚುನಾವಣೆ ಮಾ.27ಕ್ಕೆ, ಎರಡನೇ ಹಂತದ ಚುನಾವಣೆ ಎ.1ಕ್ಕೆ, ಮೂರನೇ ಹಂತದ ಚುನಾವಣೆ ಎ.6ಕ್ಕೆ ಹಾಗೂ ಮತ ಎಣಿಕೆ ಮೇ 2 ನಡೆಯಲಿದೆ" ಎಂದು ತಿಳಿಸಿದ್ದಾರೆ.
ಕೇರಳ ರಾಜ್ಯದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಎಪ್ರಿಲ್ 6ರಂದು ಚುನಾವಣೆ ನಡೆಯಲಿದೆ. ಮೇ 2ರಂದ ಮತ ಎಣಿಕೆ ನಡೆಯಲಿದೆ.
ತಮಿಳುನಾಡಿನಲ್ಲಿ ಒಂದು ಹಂತದ ಚುನಾವಣೆ ನಡೆಯಲಿದ್ದು, ಎಪ್ರಿಲ್ 6 ರಂದು ಚುನಾವಣೆ ನಡೆಯಲಿದೆ. ಮೇ 2ರಂದು ಮತ ಎಣಿಕೆ ನಡೆಯಲಿದೆ.
ಪುದುಚೇರಿಯಲ್ಲಿ ಸಹ ಒಂದು ಹಂತದಲ್ಲಿ ಮತದಾನ ನಡೆಯಲಿದೆ. ಎಪ್ರಿಲ್ 6ರಂದು ಚುನಾವಣೆ ಹಾಗೂ ಮೇ 2ರಂದು ಮತ ಎಣಿಕೆ ನಡೆಯಲಿದೆ.
ಪಶ್ಚಿಮಬಂಗಾಳದಲ್ಲಿ ಎಂಟು ಹಂತಗಳನ್ನು ಮತದಾನ ನಡೆಯಲಿದೆ. ಮೊದಲ ಹಂತದ ಮತದಾನ ಮಾರ್ಚ್ 27ಕ್ಕೆ, ಎರಡನೇ ಹಂತದ ಮತದಾನ ಎಪ್ರಿಲ್ 1ಕ್ಕೆ, ಎಪ್ರಿಲ್ 6ರಂದು ಮೂರನೇ ಹಂತದ ಮತದಾನ, ಎಪ್ರಿಲ್ 10ರಂದು ನಾಲ್ಕನೇ ಹಂತದ ಮತದಾನ, ಎಪ್ರಿಲ್ 17ರಂದು ಐದನೇ ಹಂತದ ಮತದಾನ, ಎಪ್ರಿಲ್ 22ರಂದು ಆರನೇ ಹಂತದ ಮತದಾನ, ಎಪ್ರಿಲ್ 26ರಂದು ಏಳನೇ ಹಂತದ ಮತದಾನ ಹಾಗೂ ಎಪ್ರಿಲ್ 29ರಂದು ಎಂಟನೇ ಹಂತದ ಮತದಾನ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.
"ಕೊರೊನಾ ಮಾರ್ಗಸೂಚಿಯಂತೆ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ" ಎಂದು ಆಯೋಗ ತಿಳಿಸಿದೆ.
ತಮಿಳುನಾಡಿನಲ್ಲಿ 234, ಕೇರಳದಲ್ಲಿ 140, ಪಶ್ಚಿಮಬಂಗಾಳದಲ್ಲಿ 294, ಅಸ್ಸಾಂನಲ್ಲಿ 126 ಹಾಗೂ ಪುದುಚೇರಿಯಲ್ಲಿ 30 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಕೊರೊನಾ ಮಾರ್ಗಸೂಚಿ: "ಅಭ್ಯರ್ಥಿಯೊಂದಿಗೆ ಇಬ್ಬರಿಗೆ ಮಾತ್ರ ತೆರಳಲು ಅವಕಾಶ, ಮನೆ, ಮನೆ ಪ್ರಚಾರಕ್ಕೆ ಕೇವಲ ಐವರಿಗೆ ಮಾತ್ರವೇ ಅವಕಾಶ, ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಸಿಸಿಟಿವಿ ಅಳವಡಿಕೆ, ಎರಡು ವಾಹನಗಳಲ್ಲಿ ಮಾತ್ರ ನಾಮಪತ್ರ ಸಲ್ಲಿಸಲು ಬರಬೇಕು, ಮತದಾರರ ಭದ್ರತೆಗೆ ಹೆಚ್ಚಿನ ಆದ್ಯತೆ, ಕೊರೊನಾ ಸೋಂಕಿತರಿಗೆ ಪ್ರತ್ಯೇಕವಾದ ಎಸ್ಒಪಿ, ನಾಮಪತ್ರವನ್ನು ಆನ್ಲೈನ್ ಮೂಲಕವೂ ಸಲ್ಲಿಸಬಹುದು, ಮತದಾನದ ಅವಧಿ ಒಂದು ತಾಸಿಗೆ ಹೆಚ್ಚಿಸಲಾಗುವುದು, ಮತಗಟ್ಟೆಗಳ ಶೇ.50ರಷ್ಟು ಮತದಾನದ ದೃಶ್ಯ ನೇರ ಪ್ರಸಾರ, ನಾಮಪತ್ರವನ್ನು ಚುನಾವಣಾಧಿಕಾರಿಯ ಸಮ್ಮುಖದಲ್ಲೇ ಸಲ್ಲಿಸಬೇಕು, ರೋಡ್ ಶೋನಲ್ಲಿ ಐದು ವಾಹನಗಳಿಗೆ ಮಾತ್ರವೇ ಅವಕಾಶ ಕಲ್ಪಿಸಲಾಗುವುದು" ಎಂದು ಆಯೋಗ ಹೇಳಿದೆ.