ಮುಂಬೈ, ಫೆ.26 (DaijiworldNews/PY): ಉದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸ ಅಂಟಲಿಯಾ ಬಳಿ ಗುರುವಾರ ಪತ್ತೆಯಾದ ಸ್ಪೋಟಕ ತುಂಬಿದ್ದ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸದಂತೆ ಅಪರಿಚಿತ ವ್ಯಕ್ತಿಗಳ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ.
ವಾಹನದಲ್ಲಿ ಜಿಲೆಟಿನ್ ಕಡ್ಡಿಗಳಿದ್ದು, ವಾಹನದ ನೋಂದಣಿ ಸಂಖ್ಯೆ ಕೂಡಾ ನಕಲಿ ಎಂದು ಪೊಲೀಸರು ಹೇಳಿದ್ದಾರೆ. ಗಾಂದೇವಿ ಪೊಲೀಸ್ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಗಳ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ.
"ವಾಹನದ ನಂಬರ್ ಪ್ಲೇಟ್ನಲ್ಲಿ ನೋಂದಣಿ ಸಂಖ್ಯೆಯು ಮುಖೇಶ್ ಅಂಬಾನಿಯವರ ಭದ್ರತಾ ಪಟ್ಟಿಯ ವಿವರದಲ್ಲಿರುವ ಎಸ್ಯುವಿ ವಾಹನದ ಸಂಖ್ಯೆಯನ್ನು ಹೋಲುವಂತಿದೆ" ಎಂದು ಪೊಲೀಸರು ಹೇಳಿದ್ದಾರೆ.
ವಾಹನ ಜಪ್ತಿ ಮಾಡಿದ್ದ ಸಂದರ್ಭ ಒಂದು ಪತ್ರ ದೊರೆತಿದ್ದು, ಪತ್ರದಲ್ಲಿರುವ ವಿವರವನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ಈ ಬಗ್ಗೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಟ್ವೀಟ್ ಮಾಡಿದ್ದು, "ಜಪ್ತಿ ಮಾಡಲಾದ ಸ್ಕಾರ್ಪಿಯೊ ವ್ಯಾನ್ನಲ್ಲ 20 ಜಿಲೆಟಿನ್ ಕಡ್ಡಿಗಳು ದೊರೆತಿವೆ. ಈ ಬಗ್ಗೆ ಮುಂಬೈ ಅಪರಾಧ ವಿಭಾಗದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ" ಎಂದಿದ್ದಾರೆ.