ರಾಮನಗರ, ಫೆ.26 (DaijiworldNews/HR): "ರಾಜ್ಯದಲ್ಲಿ ಬಿಜೆಪಿಗೆ ಲೈಫ್ ಕೊಟ್ಟಿದ್ದು ನಾನೇ, ಅವರಿಂದ ನನ್ನನ್ನು ಏನೂ ಮಾಡಲು ಆಗುವುದಿಲ್ಲ" ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "2006ರಲ್ಲಿ ಬಿಜೆಪಿಯವರೆಲ್ಲ ಮಂಗನ ತರ ಇನ್ನೊಂದು ಪಕ್ಷಕ್ಕೆ ಹಾರಲು ರೆಡಿಯಾಗಿದ್ದರು, ಯಡಿಯೂರಪ್ಪ ಅವರು ಕೂಡ ಅರ್ಜಿ ಹಾಕಿಕೊಂಡು ನನ್ನ ಹತ್ತಿರ ಬಂದಿದ್ದರು. ನನ್ನನ್ನು ಮಂತ್ರಿ ಮಾಡಿ. ಬಿಜೆಪಿಗೆ ರಾಜೀನಾಮೆ ಕೊಡುತ್ತೇನೆ ಎಂದು ಅಂಗಲಾಚಿದ್ದರು" ಎಂದರು.
"ರಾಮನಗರ ಜಿಲ್ಲೆಯಿಂದ ನನ್ನನ್ನು ಖಾಲಿ ಮಾಡಿಸಲು ಎಲ್ಲ ಒಟ್ಟಾಗಿ ನಿಂತಿದ್ದಾರೆ, ಆದರೆ ದೇವೇಗೌಡರ ಕುಟುಂಬದವರ ಕೊಡುಗೆ ಏನೆಂಬುದು ಜಿಲ್ಲೆಯ ಜನರಿಗೆ ಗೊತ್ತಿದೆ. ನಾನು ಬಂಡೆ ಒಡೆದಿಲ್ಲ. ಜನರ ಹಣ ಲೂಟಿ ಮಾಡಿಲ್ಲ. ನಾನು ಈ ಮಣ್ಣಿನ ಮಗ ಹಾಗಾಗಿ ನನ್ನ ಅಂತಿಮ ಕಾಲ ರಾಮನಗರದಲ್ಲಿಯೇ" ಎಂದಿದ್ದಾರೆ.
ಇನ್ನು ಸಚಿವ ಸಿ.ಪಿ. ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಆತ ಜನರ ತಲೆ ಹೊಡೆದ ಹಣದಲ್ಲಿ ಮಂತ್ರಿಯಾಗಿದ್ದಾನೆ. ಮೆಗಾ ಸಿಟಿ ಹೆಸರಲ್ಲಿ ಜನರಿಗೆ ಸೈಟು ಕೊಡುತ್ತೇನೆ ಎಂದು ಹೇಳಿ ಅವರ ಹಣವನ್ನು ಲೂಟಿ ಮಾಡಿದ್ದಾನೆ. ಯಡಿಯೂರಪ್ಪನನ್ನು, ಆರ್ಎಸ್ಎಸ್ ನಾಯಕರನ್ನು ಮೆಚ್ಚಿಸಲು ಮಾತನಾಡುತ್ತಾನೆ. ಚನ್ನಪಟ್ಟಣದಲ್ಲಿ ನನ್ನನ್ನು ಏನೂ ಮಾಡಲು ಆಗಲ್ಲ ಎನ್ನುವುದು ಆತನಿಗೆ ಚೆನ್ನಾಗಿ ಗೊತ್ತಿದೆ" ಎಂದು ಹೇಳಿದ್ದಾರೆ.