ಮುಂಬೈ, ಫೆ.26 (DaijiworldNews/HR): ಗುಜರಾತ್ನ ಮೊಟೆರಾ ಸರ್ದಾರ್ ಪಟೇಲ್ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಿದಕ್ಕೆ ಶಿವಸೇನಾ ಆಕ್ಷೇಪ ವ್ಯಕ್ತಪಡಿಸಿದೆ ಎನ್ನಲಾಗಿದೆ.
ಈ ಕುರಿತು ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದ್ದು, "ಮೋದಿ ಸರ್ಕಾರಕ್ಕೆ ಕಳೆದ ಚುನಾವಣೆಯಲ್ಲಿ ದೊರೆತ ಅಭೂತಪೂರ್ವ ಜಾನಾದೇಶವು ಬೇಜವಾಬ್ದಾರಿಯಿಂದ ವರ್ತಿಸಲು ದೊರೆತ ಪರವಾನಗಿಯಲ್ಲ" ಎಂದು ಹೇಳಲಾಗಿದೆ.
ಇನ್ನು "ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಹೆಸರನ್ನು ಇತಿಹಾಸದಿಂದ ಅಳಿಸಲು ಯತ್ನಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮತ್ತು ಗಾಂಧಿ-ನೆಹರು ಕುಟುಂಬದ ವಿರುದ್ಧ ಕಳೆದ ಐದು ವರ್ಷಗಳಿಂದ ಆರೋಪ ಮಾಡಲಾಗುತ್ತಿದ್ದು, ನಿಜವಾಗಿ ಹಾಗೆ ಮಾಡಲು ಯಾರು ಯತ್ನಿಸುತ್ತಿದ್ದಾರೆ ಎಂಬುದನ್ನು ಕ್ರೀಡಾಂಗಣದ ಮರುನಾಮಕರಣವು ಬಹಿರಂಗಪಡಿಸಿದೆ" ಎಂದು ಶಿವಸೇನಾ ಹೇಳಿದೆ.