ಬೆಂಗಳೂರು, ಫೆ.26 (DaijiworldNews/PY): "ಸಚಿವರೆಂದರೆ ದೇವಲೋಕದಿಂದ ಇಳಿದು ಬಂದವರಾ?" ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಚಿವ ಸುಧಾಕರ್ ವಿರುದ್ದ ಕೆಂಡಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾವೇನು ಬಿಟ್ಟಿ ಬಿದ್ದಲ್ಲ. ಕೆಲವು ಸಚಿವರು ಕೈಗೆ ಸಿಗೋದಿಲ್ಲ. ಅವರ ಪಿ.ಎಗಳು, ಪಿ.ಎಸ್ಳು ಫೋನ್ ರಿಸೀವ್ ಮಾಡುವುದಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ಬಂದ ಎಲ್ಲಾ ಸಚಿವರು ಹೀಗೆ ಎಂದು ನಾನು ಹೇಳುವುದಿಲ್ಲ. ಆದರೆ, ಕೆಲ ಸಚಿವರು ಮಾತ್ರ ನಮ್ಮ ಕೈಗೆ ಸಿಗುವುದಿಲ್ಲ" ಎಂದರು.
"ನಾನು ಹಲವಾರು ಬಾರಿ ಭೇಟಿಯಾಗಿದ್ದೇನೆ. ಪತ್ರವನ್ನು ಬರೆದಿದ್ದೇನೆ. ಆದರೂ ಯಾವುದೇ ಪ್ರಯೋಜನವಿಲ್ಲ. ನಾನು ಕ್ಷೇತ್ರದ ಅಭಿವೃದ್ದಿ ವಿಚಾರವಾಗಿ ರಾಜಿ ಆಗುವುದಿಲ್ಲ. ನಾನು ಧರಣಿ ಮಾಡುವುದಾಗಿ ತೀರ್ಮಾನ ಮಾಡಿದ್ದೆ. ನಿನ್ನೆ ಅವರ ಪಿ.ಎಸ್ ಕರೆ ಮಾಡಿದ್ದು, ಕೆಲವು ಕೆಲಸ ಆಗಿದೆ. ಆದರೆ, ನನ್ನ ಕೆಲಸ ಆಗಿದೆ ಎಂದು ನಾನು ಸುಮ್ಮನೆ ಕೂರುವುದಿಲ್ಲ" ಎಂದು ತಿಳಿಸಿದರು.
"ನಮ್ಮಲ್ಲಿ ಅನೇಕ ಬಾಯಿ ಇಲ್ಲದ ಶಾಸಕರಿದ್ದಾರೆ. ಅವರ ಕೆಲಸ-ಕಾರ್ಯಗಳು ಕೂಡಾ ಆಗಬೇಕು. ಆದರೆ, ಐದಾರು ಮಂದಿ ಸಚಿವರು ಕೈಗೆ ಸಿಗುತ್ತಿಲ್ಲ. ನನ್ನ ಕ್ಷೇತ್ರದಲ್ಲಿ ನಾನು ಮೂರು ಬಾರಿ ಶಾಸಕನಾಗಿ ಆಯ್ಕೆ ಆಗಿದ್ದೇನೆ. ನಾವೇನು ಬಿಟ್ಟಿ ಬಿದ್ದಿಲ್ಲ" ಎಂದು ಕಿಡಿಕಾರಿದರು.