ರಾಮನಗರ, ಫೆ.26 (DaijiworldNews/PY): ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ವಿರುದ್ದ ಏಕವಚನದಲ್ಲೇ ವಾಗ್ದಾಳಿ ನಡೆಸಿರುವ ಸಚಿವ ಸಿ.ಪಿ.ಯೋಗೇಶ್ವರ್ ಅವರು, "ಜನರೊಂದಿಗೆ ನಮ್ಮ ದುರಂಹಕಾರ ನಡೆಯಲ್ಲ. ಅಭಿವೃದ್ದಿ ಮಾಡಿದರೆ ಮಾತ್ರವೇ ಜನ ಮತ ಹಾಕುತ್ತಾರೆ ಎನ್ನುವ ಸತ್ಯ ಈಗ ಅವನಿಗೂ ತಿಳಿದಿದೆ" ಎಂದಿದ್ದಾರೆ.
"ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ಸಂದರ್ಭ ಅವರು ಜನರ ಕೈಗೆ ಸಿಗುತ್ತಿರಲಿಲ್ಲ. ಬೆಳಗ್ಗೆ 6 ಗಂಟೆಗೆ ಜನರು ಮನೆ ಬಳಿ ಹೋದರೂ ಸೇರಿಸುತ್ತಿರಲಿಲ್ಲ. ಅಧಿಕಾರ ಕಳೆದುಕೊಂಡ ಬಳಿಕ ಆರು ಗಂಟೆಗೆ ಚನ್ನಪಟ್ಟಣಕ್ಕೆ ಬರುತ್ತಿದ್ದಾರೆ. ಈಗ ತಿಳಿದಿದೆ ಜನರೊಂದಿಗೆ ನಮ್ಮ ದುರಂಹಕಾರ ನಡೆಯುವುದಿಲ್ಲ. ಅಭಿವೃದ್ದಿ ಮಾಡಿದರೆ ಮಾತ್ರವೇ ಜನರು ಮತ ಹಾಕುತ್ತಾರೆ" ಎಂದಿದ್ದಾರೆ.
"ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಕುಮಾರಸ್ವಾಮಿ ಬಂದಾಗ ಹಲ್ಲು ಗಿಂಜುತ್ತಾರೆ. ಹೂವಿನ ಹಾರ ಹಿಡಿದುಕೊಂಡು ಹೋಗುತ್ತಾರೆ. ಆದರೆ, ಅಧಿಕಾರದಲ್ಲಿದ್ದ ಸಂದರ್ಭ ಯಾರಿಗೆ ಅಧಿಕಾರ ನೀಡಿದ್ದಾನೆ?. ಮುಂದಿನ ಎಪ್ರಿಲ್ ಬಳಿಕ ನನ್ನ ರಾಜಕೀಯ ಆರಂಭವಾಗಲಿದೆ" ಎಂದು ಹೇಳಿದ್ದಾರೆ.
"ಎಪ್ರಿಲ್ ಬಳಿಕ ನಾನು ಕ್ಷೇತ್ರ ಪ್ರವಾಸ ಮಾಡಲಿದ್ದು, ಪ್ರತೀ ಹಳ್ಳಿಗೆ ಕೂಡಾ ನಾನು ಭೇಟಿ ನೀಡುತ್ತೇನೆ. ಇದರೊಂದಿಗೆ ಪಕ್ಷ ಸಂಘಟನೆ ಮಾಡುತ್ತೇನೆ. ಚನ್ನಪಟ್ಟಣ ನನ್ನ ತವರೂರು. ನನಗೆ ರಾಜಕೀಯ ಜನ್ಮ ನೀಡಿದ ತಾಲೂಕು ಆಗಿದೆ. ನನಗೆ ಸರ್ಕಾರ ವಿಧಾನಸೌಧದಲ್ಲಿ ಕಚೇರಿ ನೀಡಿದೆ. ಬೆಂಗಳೂರಿನಲ್ಲಿ ಬಂಗಲೆ ನೀಡಿದೆ. ನನಗೆ ಜನರು ಮತ ಹಾಕದಿದ್ದರೂ ಕೂಡಾ ಸಚಿವನಾಗುವ ಶಕ್ತಿಯನ್ನು ನೀವು ಕೊಟ್ಟಿದ್ದೀರಿ" ಎಂದಿದ್ದಾರೆ.