ನವದೆಹಲಿ, ಫೆ.26 (DaijiworldNews/PY): ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ಸಾಮಾಜಿಕ ಹೋರಾಟಗಾರ್ತಿ ನವದೀಪ್ ಕೌರ್ ಅವರಿಗೆ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ಜ.12ರಂದು ನವದೀಪ್ ಕೌರ್ ಅವರು ಕುಂಡ್ಲಿ ಗಡಿಭಾಗದಲ್ಲಿ ಕಾರ್ಮಿಕರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಂದರ್ಭ ಪೊಲೀಸರು ಬಂಧಿಸಿದ್ದರು. ತಮ್ಮ ವಿರುದ್ದ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದಲ್ಲಿ ನವದೀಪ್ ಕೌರ್ ಶುಕ್ರವಾರ ಜಾಮೀನು ಪಡೆದಿದ್ದಾರೆ.
ಹರಿಯಾಣದ ಕರ್ನಲ್ ಜೈಲಿನಲ್ಲಿ ನವದೀಪ್ ಕೌರ್ ಅವರನ್ನು ಇಡಲಾಗಿತ್ತು. ಕಸ್ಟಡಿಯಲ್ಲಿದ್ದ ಸಂದರ್ಭ ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಕೌರ್ ಅವರು ಆರೋಪಿಸಿದ್ದರು. ಆದರೆ, ಕೌರ್ ಅವರು ಮಾಡಿದ್ದ ಆರೋಪವನ್ನು ಜೈಲು ಅಧಿಕಾರಿಗಳು ನಿರಾಕರಿಸಿದ್ದರು.