ದಾವಣಗೆರೆ, ಫೆ.26 (DaijiworldNews/HR): "ಸರ್ಕಾರದ ನಿಷ್ಕ್ರೀಯತೆಯಿಂದಲೇ ಕರ್ನಾಟಕದಲ್ಲಿ ಪದೇ ಪದೇ ಸ್ಫೋಟವಾಗುತ್ತಿದೆ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಶಿವಮೊಗ್ಗ ಜಿಲ್ಲೆಯಲ್ಲಿ ಸ್ಫೋಟ ಆದಾಗಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು, ಆದರೆ ಸರ್ಕಾರ ಎಚ್ಚೆತ್ತುಕೊಳ್ಳದೇ ಇದ್ದಿದ್ದರಿಂದ ಮತ್ತೆ ಸ್ಫೋಟವಾಗಿ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದ ರಾಜ್ಯದ ಜನ ಭೀತರಾಗಿದ್ದಾರೆ. ಇದು ರಾಜ್ಯದಲ್ಲಿ ಸರ್ಕಾರವೇ ಇಲ್ಲ ಎಂಬುದನ್ನು ತೋರಿಸಿಕೊಡುತ್ತದೆ" ಎಂದರು.
ಇನ್ನು "ಲೋಕಸಭೆ, ವಿಧಾನಸಭೆ ಉಪ ಚುನಾವಣೆ ಘೋಷಣೆ ಆಗಲಿದ್ದು, ನಾವು ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದೇವೆ. ಸರ್ಕಾರದ ರೈತ ವಿರೋಧಿ ನೀತಿ, ಜನ ವಿರೋಧಿ ನೀತಿ, ಯುವಕರ ವಿರೋಧಿ ನೀತಿ, ಪ್ರಜಾಪ್ರಭುತ್ವ ವಿರೋಧಿ ನೀತಿಗೆ ಜನರು ಪಾಠ ಕಲಿಸಲಿದ್ದಾರೆ. ದಿಶಾ ಎಂಬ ವಿದ್ಯಾರ್ಥಿನಿಯನ್ನು ಟೂಲ್ಕಿಟ್ ಮೂಲಕ ಷಡ್ಯಂತ್ರ ಮಾಡಿದ್ದಾರೆ ಎಂದು ಆರೋಪಿಸಿ ಬಂಧಿಸಿದ್ದರು. ಇದು ಯುವಕರಲ್ಲಿ ಭಯ ಹುಟ್ಟಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡುವ ಕೆಲಸ ಇದಾಗಿದೆ" ಎಂದು ಹೇಳಿದ್ದಾರೆ.