ನವದೆಹಲಿ, ಫೆ.26 (DaijiworldNews/HR): "ಪಾಕಿಸ್ತಾನದೊಂದಿಗೆ ಸಹಜ ಬಾಂಧವ್ಯವನ್ನು ಭಾರತ ಬಯಸುತ್ತಿದ್ದು, ಎಲ್ಲ ಸಮಸ್ಯೆಗಳನ್ನು ದ್ವಿಪಕ್ಷೀಯವಾಗಿ ಮತ್ತು ಶಾಂತಿಯುತವಾಗಿ ಪರಿಹರಿಸಿಕೊಳ್ಳಲು ಭಾರತ ಬದ್ಧವಾಗಿದೆ" ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಎಲ್ಲ ಕದನ ವಿರಾಮ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಭಾರತ ಮತ್ತು ಪಾಕಿಸ್ತಾನ ಸೇನೆ ಒಪ್ಪಿರುವ ಬೆನ್ನಲ್ಲೇ ವಿದೇಶಾಂಗ ಸಚಿವಾಲಯ ಈ ಹೇಳಿಕೆ ನೀಡಿದೆ ಎನ್ನಲಾಗಿದೆ.
ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ನಿಲುವೇನು ಎಂಬ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ, " ಪ್ರಮುಖ ವಿಷಯಗಳಲ್ಲಿ ನಮ್ಮ ನಿಲುವು ಬದಲಾಗಿಲ್ಲ. ಅದನ್ನು ಪುರುಚ್ಚರಿಸಬೇಕು ಎಂದು ನಾನು ಭಾವಿಸುವುದಿಲ್ಲ" ಎಂದು ಹೇಳಿದ್ದಾರೆ.
ಇನ್ನು ಭಾರತ ಮತ್ತು ಪಾಕಿಸ್ತಾನ 2003ರಲ್ಲಿ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿವೆ. ಆದರೆ ನಂತರ ಅನೇಕ ಬಾರಿ ಕದನವಿರಾಮ ಉಲ್ಲಂಘನೆಯಾಗಿವೆ ಎನ್ನಲಾಗಿದೆ.