ಹರಿದ್ವಾರ, ಫೆ.26 (DaijiworldNews/HR): "ಪ್ರಧಾನಿ ನರೇಂದ್ರ ಮೋದಿಯವರೊಬ್ಬ ಯುಗಪುರುಷ, ಹಾಗಾಗಿ ಅವರ ಹೆಸರನ್ನು ಕ್ರೀಡಾಂಗಣಕ್ಕೆ ಇಡುವುದರಲ್ಲಿ ತಪ್ಪಿಲ್ಲ" ಎಂದು ಯೋಗ ಗುರು ಬಾಬಾ ರಾಮ್ದೇವ್ ಹೇಳಿದ್ದಾರೆ.
ಈ ಕುರಿತು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಹಿಂದಿನ ಕಟ್ಟಡಗಳು ಮತ್ತು ಸ್ಮಾರಕಗಳಿಗೆ ಆ ಕಾಲದ ಪ್ರಮುಖ ವ್ಯಕ್ತಿಗಳ ಹೆಸರಿಡಬಹುದಾಗಿದ್ದರೆ, ವರ್ತಮಾನ ಕಾಲದ ಖ್ಯಾತ ವ್ಯಕ್ತಿ ಹಾಗೂ ಯುಗಪುರುಷರಾಗಿರುವ ಮೋದಿ ಅವರ ಹೆಸರನ್ನು ಕ್ರೀಡಾಂಗಣಕ್ಕೆ ಯಾಕೆ ಇಡಬಾರದು?" ಎಂದು ಪ್ರಶ್ನಿಸಿದ್ದಾರೆ.
ಇನ್ನು ಅಹಮದಾಬಾದ್ನ ಕ್ರಿಕೆಟ್ ಕ್ರೀಡಾಂಗಣಕ್ಕೆ ಬುಧವಾರ ಮೋದಿ ಹೆಸರಿಡಲಾಗಿದ್ದು, ಇದಕ್ಕೆ ರಾಜಕೀಯ ವಲಯದಲ್ಲಿ ಹಲವು ಟೀಕೆಗಳು ಕೇಳಿಬಂದಿದ್ದವು. ದೇಶಕ್ಕೇ ಮೋದಿ ಹೆಸರಿಡಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಾಮ್ದೇವ್, ಇದು ಕೇವಲ ರಾಜಕೀಯ ಪ್ರೇರಿತ ಹೇಳಿಕೆಯಷ್ಟೆ, ಅದಕ್ಕಿಂತ ಹೆಚ್ಚಿನದ್ದೇನಿಲ್ಲ ಎಂದು ಹೇಳಿದ್ದಾರೆ.