ಬೆಂಗಳೂರು, ಫೆ. 25 (DaijiworldNews/SM): ಒಂದೆಡೆ ಜನಸಾಮಾನ್ಯರಿಗೆ ಸರಕಾರ ವಿವಿಧ ರೀತಿಯಲ್ಲಿ ಹೊರೆ ಹಾಕುತ್ತಿದೆ. ಪೆಟ್ರೋಲ್ ಡೀಸೆಲ್, ಗ್ಯಾಸ್ ಸೇರಿದಂತೆ ಅಗತ್ಯ ಸಾಮಾಗ್ರಿಗಳ ಬೆಲೆ ಹೆಚ್ಚಳ ಮಾಡುತ್ತಿದೆ. ಮತ್ತೊಂದೆಡೆ ಸರಕಾರದ ಬೊಕ್ಕಸದಲ್ಲಿ ಹಣವಿಲ್ಲ ಎಂಬ ಕೂಗು ಜೋರಾಗಿದೆ. ಇವುಗಳ ನಡುವೆ ಸರಕಾರ ದುಂದು ವೆಚ್ಚಕ್ಕೆ ಮುಂದಾಗಿದೆ. ಸಚಿವರು ಹಾಗೂ ಸಂಸದರಿಗೆ 23 ಲಕ್ಷ ರೂಪಾಯಿಯ ಕಾರುಗಳನ್ನು ಖರೀದಿಸಲು ರೆಡಿಯಾಗಿದೆ.
ಈಗಾಗಲೇ ಸಚಿವರು, ಸಂಸದರು ದುಬಾರಿ ಕಾರುಗಳಲ್ಲೇ ಓಡಾಡುತ್ತಿದ್ದಾರೆ. ಅದು ಸಾಲದ್ದಕ್ಕೆ ಕೊರೋನಾ ಸಂಕಷ್ಟದ ಸಮಯದಲ್ಲಿ ಮತ್ತಷ್ಟು ದುಬಾರಿ ಕಾರುಗಳಾನ್ನು ಖರೀದಿಸಲು ಸರಕಾರ ಮುಂದಾಗಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 23 ಲಕ್ಷ ಮೌಲ್ಯದ ಕಾರುಗಳನ್ನು ಖರೀದಿಸುವ ಪ್ರಸ್ತಾಪಕ್ಕೆ ರಾಜ್ಯ ಸರಕಾರ ಅಸ್ತು ಎಂದಿದೆ.
ರಾಜ್ಯದಲ್ಲಿರುವ ಒಟ್ಟು 32 ಸಚಿವರು ಹಾಗೂ 28 ಸಂಸದರು ಸೇರಿದಂತೆ ಒಟ್ಟು 60 ಕಾರುಗಳನ್ನು ಖರೀದಿಸಲು ಸರಕಾರ ಸಮ್ಮತಿ ಸೂಚಿಸಿದೆ. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ಸರಿಸುಮಾರು 13.80 ಕೋ. ರೂ. ಹೊರೆಯಾಗಲಿದೆ. ಕೊರೊನಾ ಬಳಿಕ ಜನ ಸಾಮಾನ್ಯರಿಗೆ ವಿವಿಧ ರೀತಿಯಲ್ಲಿ ಸಂಕಷ್ಟಗಳು ಎದುರಾಗಿದ್ದಾರೆ. ಆದರೆ, ಸರಕಾರ ಮೋಜು ಮಸ್ತಿಯಲ್ಲಿ ತೊಡಗಿರುವುದು ಜನರ ಕೆಂಗಣ್ಣಿಗೆ ಗುರುಯಾಗಿದೆ. ಈ ನಡುವೆ ನಿರಂತರ ಬೆಲೆ ಏರಿಕೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರಸ್ತುತ ಎಲ್ಲ ಸಂಸದರು ಸಚಿವರಲ್ಲಿ ದುಬಾರಿ ಕಾರುಗಳೇ ಇವೆ. ಈ ನಡುವೆ ಮತ್ತೆ ಹೊಸ ಕಾರುಗಳ ಖರೀದಿಯ ಅಗತ್ಯವಿದೆಯೇ? ಅದೂ ಕೂಡ ಜನರ ತೆರೆಗೆ ಹಣದಿಂದ ಸಂಕಷ್ಟ ಸಮಯದಲ್ಲಿ ಪ್ರಸ್ತಾವನೆ ಅಂಗೀಕರಿಸಿರುವುದು ಎಷ್ಟು ಸರಿ ಎನ್ನುವ ಮಾತುಗಳು ಕೇಳಿ ಬಂದಿವೆ.
ಸರಕಾರ ಕೈಗೊಂಡ ಈ ದುಂದು ವೆಚ್ಚದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆಯಾದರೂ, ಈ ಬಗ್ಗೆ ಪ್ರಮುಖ ಪಕ್ಷಗಳು ಮೌನವಹಿಸಿವೆ.