ನವದೆಹಲಿ, ಫೆ. 25 (DaijiworldNews/SM): ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನಿರಂತರವಾಗಿದ್ದು, ಇದರಿಂದ ಜನ ಸಾಮಾನ್ಯರು ಕಂಗಾಲಾಗಿದ್ದಾರೆ. ಈ ನಡುವೆ ಮತ್ತೊಮ್ಮೆ ಗ್ಯಾಸ್ ಬೆಲೆ ಹೆಚ್ಚಳ ಮಾಡಲಾಗಿದೆ. ಸಬ್ಸಿಡಿ ಸಹಿತ ಹಾಗೂ ಸಬ್ಸಿಡಿ ರಹಿತ ಅಡುಗೆ ಅನಿಲ ಎಲ್ಪಿಜಿ ಬೆಲೆಯನ್ನು ಗುರುವಾರ ಪ್ರತಿ ಸಿಲಿಂಡರ್ಗೆ 25 ರೂಪಾಯಿ ಏರಿಕೆ ಮಾಡಲಾಗಿದೆ.
ಆ ಮೂಲಕ ತಿಂಗಳೊಂದರಲ್ಲೇ ಮೂರು ಬಾರಿ ಎಲ್ ಪಿಜಿ ಬೆಲೆ ಏರಿಕೆಯಾದಂತಾಗಿದೆ. ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ನ ಬೆಲೆ 794 ರೂಪಾಯಿಗೆ ಮುಟ್ಟಿದೆ. ಬೆಂಗಳೂರಿನಲ್ಲೂ ಕೂಡ ಪ್ರತಿ ಸಿಲಿಂಡರ್ ಬೆಲೆ 794ಕ್ಕೆ ಏರಿಕೆಯಾಗಿದೆ. ಫೆ.4ರಂದು 25 ರೂ. ಫೆ. 15ರಂದು 50 ರೂ. ಹೆಚ್ಚಿಸಲಾಗಿತ್ತು. ಇದೀಗ ಮತ್ತೆ 25 ರೂಪಾಯಿ ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಮತ್ತೆ ಹೆಚ್ಚುವರಿ ಹೊರೆ ಬಿದ್ದಂತಾಗಿದೆ.
ಕಳೆದ ಡಿಸೆಂಬರ್ ನಿಂದ ಇಲ್ಲಿಯವರಿಗೆ ಎಲ್ ಪಿಜಿ ದರ 150 ರೂಪಾಯಿ ಹೆಚ್ಚಾಗಿದ್ದು, ಜನವರಿ ತಿಂಗಳಲ್ಲಿ ಹೆಚ್ಚಳ ಕಂಡಿರಲಿಲ್ಲ. ಅಂತರಾಷ್ಠಿಯ ಮಾರುಕಟ್ಟೆಯಲಿನ ಏರಿಳಿತಗಳಿಂದಾಗಿ ಬೆಲೆ ಏರಿಕೆಯಾಗಿದೆ ಎನ್ನುವ ಅಭಿಪ್ರಾಯಗಳನ್ನು ವಿಶ್ಲೇಷಕರು ವ್ಯಕ್ತಪಡಿಸಿದ್ದಾರೆ.