ಗುವಾಹಟಿ, ಫೆ. 25 (DaijiworldNews/HR): ಹಿಂದೆಲ್ಲ ಪ್ರತಿಭಟನೆ, ಶಸ್ತಾಸ್ತ್ರ, ಹಿಂಸಾಚಾರಗಳಿಗೆ ಹೆಸರುವಾಸಿಯಾಗಿದ್ದ ಅಸ್ಸಾಂ ಈಗ ಅಭಿವೃದ್ಧಿ, ಕೈಗಾರಿಕಾ ಹೂಡಿಕೆ, ಶಿಕ್ಷಣ ಹಾಗೂ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಈ ಕುರಿತು ನಾಗೌನ್ ಜಿಲ್ಲೆಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, "ಪ್ರಧಾನಿ ಮೋದಿ ನೇತೃತ್ವದಲ್ಲಿ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಮತ್ತು ಸಚಿವ ಸಂಪುಟ ಸಚಿವ ಹಿಮಂತ ಬಿಸ್ವಾ ಶರ್ಮಾ ಪ್ರಾರಂಭಿಸಿದ ಹೊಸ ಯುಗದ ಅಭಿವೃದ್ಧಿಯ ಮೊದಲ ಹೆಜ್ಜೆ ಇದಾಗಿದೆ" ಎಂದರು.
"ಪ್ರವಾಹ ಮುಕ್ತ, ಒಳನುಸುಳುವಿಕೆ ಮುಕ್ತ ಮತ್ತು ಹಿಂಸಾಚಾರ ಮುಕ್ತವನ್ನಾಗಿಸಿ ಈಶಾನ್ಯ ರಾಜ್ಯವನ್ನು ದೇಶದ ಅತಿ ದೊಡ್ಡ ಜಿಡಿಪಿ ಕೊಡುಗೆದಾರರನ್ನಾಗಿ ಮಾಡಬೇಕಿದೆ" ಎಂದಿದ್ದಾರೆ.
ಇನ್ನು ಈಶಾನ್ಯದ ಎಲ್ಲ ಎಂಟು ರಾಜ್ಯಗಳಲ್ಲಿ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳು ಅಧಿಕಾರದಲ್ಲಿದ್ದು, ಶಿಕ್ಷಣ ಹಾಗೂ ಪ್ರವಾಸೋದ್ಯಮದಂತಹ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಬಹುದು ಎಂಬುದನ್ನು ಅಸ್ಸಾಂ ಜನರು ಅರಿತುಕೊಂಡಿದ್ದಾರೆ" ಎಂದು ಹೇಳಿದ್ದಾರೆ.