ಪುದುಚೇರಿ, ಫೆ. 25 (DaijiworldNews/HR): "ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೆರವು ನೀಡಲಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಈ ಕುರಿತು ಪೂರ್ಣಗೊಂಡ ವಿವಿಧ ಯೋಜನೆಗಳ ಉದ್ಘಾಟನೆ, ಹಲವು ಯೋಜನೆಗಳಡಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, "ದೇಶದ ಅಭಿವೃದ್ಧಿಗೆ ಉತ್ತಮ ರಸ್ತೆ ಸೇರಿದಂತೆ ಸಂಪರ್ಕ ಜಾಲ ಅಗತ್ಯವಾಗಿದ್ದು, ಉತ್ತಮ ಸಂಪರ್ಕ ರಸ್ತೆಗಳ ನಿರ್ಮಾಣದಿಂದ ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆಯೂ ಲಭಿಸುತ್ತದೆ" ಎಂದರು.
ಇನ್ನು "ಪುದುಚೇರಿ ಹೆಚ್ಚಿನ ಮಾನವ ಸಂಪನ್ಮೂಲ ಹೊಂದಿದ್ದು, ಪ್ರವಾಸೋದ್ಯಮಕ್ಕೂ ಇಲ್ಲಿ ಹೆಚ್ಚಿನ ಅವಕಾಶಗಳಿವೆ. ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸುವುದರಿಂದ ಉದ್ಯಮಗಳು ಬೆಳೆಯುತ್ತವೆ. ಉದ್ಯೋಗಾವಕಾಶಗಳು ಹೆಚ್ಚಲಿವೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ದೇಶವನ್ನಾಗಳಿದ ಬ್ರಿಟಿಷರು ವಿಭಜಿಸಿ ಆಳುವ ನೀತಿ ಅನುಸರಿಸುತ್ತಿದ್ದರು. ಈಗಿನ ಕಾಂಗ್ರೆಸ್ ಜನರನ್ನು ವಿಭಜಿಸಿ, ಸುಳ್ಳು ಹೇಳಿ, ಆಡಳಿತ ನಡೆಸುವ ನೀತಿಯನ್ನು ಅನುಸರಿಸುತ್ತಿದೆ" ಎಂದು ಹೇಳಿದ್ದಾರೆ.