ಕಲಬುರ್ಗಿ, ಫೆ. 25 (DaijiworldNews/HR): "ಬಿಜೆಪಿ ಸರ್ಕಾರ ಅಧಿಕಾರ ಬಹಿಸಿಕೊಂಡಾಗಿನಿಂದ ಕಲ್ಯಾಣ ಕರ್ನಾಟಕಕ್ಕೆ ನಿರಂತರ ಅನ್ಯಾಯವಾಗುತ್ತಿದೆ" ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ರಾಯಚೂರಿನಲ್ಲಿ ಆರಂಭವಾಗಬೇಕಿದ್ದ ಐಐಟಿ ಧಾರವಾಡಕ್ಕೆ ಹೋದರೆ, ಕಲಬುರ್ಗಿಯ ಇಎಸ್ಐಸಿ ಆಸ್ಪತ್ರೆಯಲ್ಲಿ ಆರಂಭವಾಗಬೇಕಿದ್ದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಇದೀಗ ಹುಬ್ಬಳ್ಳಿಗೆ ಮಂಜೂರು ಮಾಡಲಾಗಿದೆ" ಎಂದರು.
"ಹೈದರಾಬಾದ್ ಕರ್ನಾಟಕ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಬದಲಿಸಿದರೆ ಸಾಕಾಗುವುದಿಲ್ಲ, ಅಭಿವೃದ್ಧಿಗೆ ಹಣವನ್ನೂ ನೀಡಬೇಕು. ಆದರೆ ದುರದೃಷ್ಟವೆಂದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಈ ಬಗ್ಗೆ ಕಾಳಜಿ ಇಲ್ಲ" ಎಂದಿದ್ದಾರೆ.
ಇನ್ನು "ನಾನು ಮುಖ್ಯಮಂತ್ರಿಯಾಗಿದ್ದಾಗ ರಾಯಚೂರು, ಯಾದಗಿರಿ ಹಾಗೂ ಬೀದರ್ ಜಿಲ್ಲೆಯಲ್ಲಿ ಗ್ರಾಮವಾಸ್ತವ್ಯ ಮಾಡಿದ್ದೇನೆ. ರೈತರ ಸಾಲಮನ್ನಾಕ್ಕೆ 25 ಸಾವಿರ ಕೋಟಿ ತೆಗೆದಿಟ್ಟಿದ್ದು, ಬಿಜೆಪಿ ಸರ್ಕಾರ ಅದರಲ್ಲಿ 10 ಸಾವಿರ ಕೋಟಿಯನ್ನು ಹಿಂದಕ್ಕೆ ಪಡೆದು ರೈತರಿಗೆ ದ್ರೋಹ ಬಗೆದಿದೆ" ಎಂದು ಹೇಳಿದ್ದಾರೆ.