ಉತ್ತರ ಪ್ರದೇಶ, ಫೆ.25 (DaijiworldNews/MB) : ತನ್ನ ಮನೆಯ ಮರದಲ್ಲಿ ಬೆಳೆದ ಪೇರಳೆ ಹಣ್ಣುಗಳನ್ನು ಕೀಳಲು ಬಿಟ್ಟಿಲ್ಲವೆಂಬ ಕಾರಣಕ್ಕೆ ಆ ವ್ಯಕ್ತಿಯನ್ನು ನೆರೆಹೊರೆಯ ಜನರು ಥಳಿಸಿ ಹತ್ಯೆಗೈದ ಘಟನೆ ಅಜೀಮ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶೇಖಪುರ ಗ್ರಾಮದಲ್ಲಿ ನಡೆದಿದೆ.
ತನ್ನ ಮನೆಯಲ್ಲಿ ಬೆಳೆದಿರುವ ಹಣ್ಣುಗಳನ್ನು ಕೀಳಲು ಬಿಟ್ಟಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ 27 ವರ್ಷದ ಮೆಹಫೂಜ್ ಅಲಿ ಎಂಬಾತನನ್ನು ನೆರೆಹೊರೆಯವರು ಥಳಿಸಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಆತ ಸಾವನ್ನಪ್ಪಿದ್ದಾನೆ.
ಈ ಬಗ್ಗೆ ಮಾಹಿತಿ ನೀಡಿದ ಜೀಮ್ ನಗರ ಪೊಲೀಸ್ ಠಾಣೆಯ ರವೀಂದ್ರ ಕುಮಾರ್, "ವ್ಯಕ್ತಿಯನ್ನು ರಾಂಪುರ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ. ಬುಧವಾರ ಮರಣೋತ್ತರ ಪರೀಕ್ಷೆ ಮಾಡಿಸಲಾಗಿದ್ದು ಇದರಲ್ಲಿ ಆತ ಗಾಯಗಳಿಂದಾಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಪೈಕಿ ಶಕೀರ್ ಎಂಬಾತನನ್ನು ಬಂಧಿಸಲಾಗಿದೆ'' ಎಂದು ತಿಳಿಸಿದ್ದಾರೆ.