ನವದೆಹಲಿ, ಫೆ. 25 (DaijiworldNews/HR) : "ಮಾ. 1ರಿಂದ ಕೊರೊನಾ ಲಸಿಕೆ ವಿತರಣೆಯ ಎರಡನೇ ಹಂತದಲ್ಲಿ 60 ವರ್ಷ ಮೀರಿದ ಮತ್ತು ಇತರ ರೋಗಗಳಿರುವ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲು ತಯಾರಿ ಆರಂಭವಾಗಿದೆ" ಎಂದು ಕೇಂದ್ರ ಸರಕಾರ ತಿಳಿಸಿದೆ.
ಸಾಂಧರ್ಭಿಕ ಚಿತ್ರ
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಸಚಿವರಾದ ರವಿ ಶಂಕರ್ ಪ್ರಸಾದ್ ಮತ್ತು ಪ್ರಕಾಶ್ ಜಾಬ್ಡೇಕರ್, "ಈ ಬಾರಿಯ ಲಸಿಕೆ ನೀಡಿಕೆ ಪ್ರಕ್ರಿಯೆ ಒಂದಷ್ಟು ವಿಶೇಷಗಳಿಂದ ಕೂಡಿದ್ದು, ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಉಚಿತವಾಗಿ ಲಸಿಕೆ ನೀಡಲಾಗಿದೆ. ಈ ಬಾರಿ ಮಾತ್ರ ಉಚಿತ ಮತ್ತು ಹಣ ನೀಡಿ ಲಸಿಕೆ ತೆಗೆದುಕೊಳ್ಳುವ ಅವಕಾಶ ಇದೆ. ಸರಕಾರಿ ವೈದ್ಯಕೀಯ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ಪಡೆಯಬಹುದಾಗಿದ್ದರೆ ಖಾಸಗಿ ವೈದ್ಯಕೀಯ ಕೇಂದ್ರಗಳಲ್ಲಿ ಹಣ ನೀಡಬೇಕು. ಪ್ರತೀ ಡೋಸ್ ಲಸಿಕೆಗೆ ಎಷ್ಟು ಶುಲ್ಕ ಎಂಬ ಬಗ್ಗೆ ಮೂರ್ನಾಲ್ಕು ದಿನಗಳಲ್ಲಿ ನಿರ್ಧಾರವಾಗಲಿದೆ" ಎಂದಿದ್ದಾರೆ.
ಇನ್ನು "ಸರಕಾರಿ ವೈದ್ಯಕೀಯ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುವುದು ಮತ್ತು ಇದರ ವೆಚ್ಚವನ್ನು ಸರಕಾರ ಭರಿಸಲಿದೆ. ಇದಕ್ಕಾಗಿ ಸರಕಾರವೇ ಲಸಿಕೆ ಖರೀದಿಸಿ ರಾಜ್ಯ ಸರಕಾರಗಳಿಗೆ ಕಳುಹಿಸಲಿದೆ" ಎಂದು ಜಾಬ್ಡೇಕರ್ ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ಲಸಿಕೆ ಪಡೆಯದೆ ಇರುವ ರಾಜ್ಯದ ಎರಡೂವರೆ ಲಕ್ಷ ಮಂದಿ ಆರೋಗ್ಯ ಕಾರ್ಯಕರ್ತರು ಗುರುವಾರ ಲಸಿಕೆ ಪಡೆಯಬಹುದು. ಸರಕಾರ ಇವರಿಗೆ ಕೊನೆಯ ಅವಕಾಶ ನೀಡಿದ್ದು, ಮುಂದೆ ಸಾಮಾನ್ಯ ಜನರಿಗೂ ಲಸಿಕೆ ನೀಡಿಕೆ ಆರಂಭವಾಗಲಿದೆ. ಇವರಿಗೆ ಆರೋಗ್ಯ ಕಾರ್ಯಕರ್ತರೇ ಲಸಿಕೆ ನೀಡಬೇಕು. ಆದರೆ ಇನ್ನೂ ಶೇ. 40ರಷ್ಟು ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದಿಲ್ಲ ಎನ್ನಲಾಗಿದೆ.